Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ರಾಜ್ಯಪಾಲರ ಭಾಷಣ: ಡಬಲ್ ಎಂಜಿನ್ ಸರ್ಕಾರದ ಡಬಲ್ ದ್ರೋಹ: ಸಿದ್ದರಾಮಯ್ಯ

ಬೆಂಗಳೂರು: ಡಬ್ಬಲ್ ಎಂಜಿನ್ ಸರ್ಕಾರ ನಾಡಿಗೆ ಡಬ್ಬಲ್ ದ್ರೋಹ ಎಸಗಿದೆ. ಸರ್ಕಾರ ರಾಜ್ಯಪಾಲರ ಬಾಯಿಂದ ಸುಳ್ಳು ಹೇಳಿಸಿದೆ. ಸರ್ಕಾರ ರಾಜ್ಯಪಾಲರ ದಿಕ್ಕು ತಪ್ಪಿಸಿ ರಾಜ್ಯಪಾಲರ ಮಾತಿನ ಮೂಲಕ ನಾಡಿನ ಜನರ ದಿಕ್ಕು ತಪ್ಪಿಸಿದೆ.  ಕನ್ನಡಿಗರನ್ನು ಸಾಲದ ಪ್ರಪಾತಕ್ಕೆ ತಳ್ಳಿದ್ದರ ಬಗ್ಗೆ ಪ್ರಸ್ತಾಪವೇ ಇಲ್ಲ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ತನ್ನ ಯೋಜನೆಗಳು ಎಂದು ಬಿಂಬಿಸಿಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ನಾಗರಿಕ ಸರ್ಕಾರಕ್ಕೆ ನಿರ್ದಿಷ್ಟವಾದ ಗೊತ್ತು-ಗುರಿಗಳಿರುತ್ತವೆ. ಆದರೆ, ರಾಜ್ಯಪಾಲರ ಭಾಷಣ ಕೇಳಿದ ಮೇಲೆ, ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿಗಳಿಲ್ಲ ಎಂದು ಸ್ಪಷ್ಟವಾಗುತ್ತದೆ ಎಂದರು.

ಸರ್ಕಾಗಳಿಗೆ ತನ್ನದೇ ಆದ ಆಧ್ಯತೆಗಳಿರುತ್ತವೆ. ಆಧ್ಯತೆಗಳಲ್ಲಿ ಮುಖ್ಯವಾಗಿ ಒಂದು, ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ಕೊಡುವುದು, ಎರಡು-ಅಭಿವೃದ್ಧಿ  ಕಾರ್ಯಕ್ರಮಗಳಿಗೆ ಒತ್ತು ಕೊಡುವುದು ಆಗಿರುತ್ತದೆ. ಸರ್ಕಾರ ಸಂಪೂರ್ಣವಾಗಿ ಇವೆರಡನ್ನೂ ಮರೆತಿದೆ ಎಂದು ಸ್ಪಷ್ಟವಾಗುತ್ತಿದೆ. ರಾಜ್ಯದ ಜನರಿಗೆ ಕಲ್ಯಾಣವೂ ಇಲ್ಲ. ಅಭಿವೃದ್ಧಿಯ ಮಾತೇ ಇಲ್ಲ ಎಂದು ಅವರು ಹೇಳಿದರು. ಈ ಸರ್ಕಾರ ಅತ್ಯಂತ ನಿಷ್ಕ್ರಿಯವಾಗಿದೆ. ವೈಫಲ್ಯಗಳಿಂದ ಕೂಡಿದೆ. ಜನರಿಗಾಗಿ ಏನೂ ಮಾಡುತ್ತಿಲ್ಲ ಎಂಬುದು ರಾಜ್ಯಪಾಲರ ಭಾಷಣದಿಂದ ಸ್ಪಷ್ಟವಾಗಿದೆ. 

ನಾನು ನನ್ನ ರಾಜಕೀಯ ಅನುಭವದ ಮೇಲೆ ಹೇಳುವುದಾದರೆ ಇಷ್ಟೊಂದು ಕೆಟ್ಟದಾದ ಭಾಷಣವನ್ನು ಎಂದೂ ಕೇಳಿರಲಿಲ್ಲ. ಏನನ್ನೂ ಮಾಡದ ಸರ್ಕಾರವನ್ನು ಆರಿಸಿ ಕಳುಹಿಸಿದ್ದು ಈ ನಾಡಿನ ದೌರ್ಭಾಗ್ಯ ಎಂಬುದು ರಾಜ್ಯಪಾಲರ ಭಾಷಣದಿಂದ ರಾಜ್ಯದ ಜನರಿಗೆ ಇಂದು ಅರ್ಥವಾಗಿದೆ ಎಂದರು.

ಇಂದು ರೈತರಾದಿಯಾಗಿ ಸಮಸ್ತ ದುಡಿಯುವ ಜನ, ಸಮಸ್ತ ದಲಿತ ಮತ್ತು ಮಹಿಳಾ ಸಮುದಾಯ ಎಲ್ಲರೂ ಭೀಕರ ಸಂಕಷ್ಟದಲ್ಲಿದ್ದಾರೆ ಎಂಬುದು ಈ ಸರ್ಕಾರಕ್ಕೆ ಇನ್ನೂ ಮನದಟ್ಟಾಗಿಲ್ಲ. ಅಥವಾ ಉದ್ದೇಶಪೂರ್ವಕವಾಗಿಯೇ ಈ ವರ್ಗಗಳನ್ನು ಸರ್ಕಾರ ದಮನ ಮಾಡುತ್ತಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಾಮಾನ್ಯವಾಗಿ ರಾಜ್ಯಪಾಲರ ಭಾಷಣ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ವರ್ಷಕ್ಕೆ ಇರಬೇಕಾದ ಮುನ್ನೋಟದ ಗುರಿಗಳನ್ನು ಒಳಗೊಂಡಿರುತ್ತದೆ. ಈ ಸರ್ಕಾರ ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ ಎಂದು ಸಿದ್ದರಾಮಯ್ಯ ಹೇಳಿದರು.

ಕೋವಿಡ್ ನಿಂದ ಕೋವಿಡ್ ಗಾಗಿ: ಹೆಚ್ ಡಿಕೆ

ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದ ಭಾಷಣವು ಕೋವಿಡ್ ನಿಂದ, ಕೋವಿಡ್ ಗಾಗಿ, ಕೋವಿಡ್ ಗೋಸ್ಕರವೇ ಮಾಡಿರುವ ಭಾಷಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸೋಮವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು; ರಾಜ್ಯದ ಅಭಿವೃದ್ಧಿ ಮುನ್ನೋಟದಂತೆ ಇರಬೇಕಾಗಿದ್ದ ರಾಜ್ಯಪಾಲರ ಭಾಷಣವು ನೀರಸ ಮತ್ತು ನಿರಾಶಾದಾಯಕವಾಗಿತ್ತು ಎಂದರು.

ದಿಕ್ಸೂಚಿ ಇಲ್ಲದ ಭಾಷಣ

ಸರ್ಕಾರದ ಹಿಂದಿನ ಹಾಗೂ ಮುಂದೆ ಮಾಡಬಹುದಾದ ಅಭಿವೃದ್ಧಿಯ ಬಗ್ಗೆ ಭಾಷಣದಲ್ಲಿ ಏನೇನು ಹೇಳಿಲ್ಲ. ಸ್ಪಷ್ಟತೆ, ನಿರ್ಧಿಷ್ಟ ದಿಕ್ಸೂಚಿ ಇಲ್ಲದ ಭಾಷಣ ಇದು. ರಾಜ್ಯಪಾಲರ ಭಾಷಣದ ಮೂಲಕವೇ ಮುಂದಿನ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಸರಕಾರವೇ ನೇರವಾಗಿ ಜನರಿಗೆ ಹೇಳಿದಂತಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಅತ್ಯಂತ ಅಮೂಲ್ಯವಾದ ರಾಜ್ಯಪಾಲರ ಭಾಷಣದಲ್ಲಿ ಹಳೆಯ ಕೋವಿಡ್ ಅಂಶಗಳನ್ನಷ್ಟೆ ಓದಿಸಲಾಗಿದೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಅವರು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button