Breaking NewsLatestಕಲಬುರ್ಗಿಜಿಲ್ಲಾ ಸುದ್ದಿರಾಜ್ಯಸುದ್ದಿ

ಒಂದೂವರೆ ಗಂಟೆ ನಡುರಸ್ತೆಯಲ್ಲಿ ನಿಂತ ಗೂಡ್ಸ್ ರೈಲು: ಪರದಾಡಿದ ಸಾರ್ವಜನಿಕರು

ಕಲಬುರಗಿ: ವಾಡಿ ಎಸಿಸಿ ಕಂಪನಿಗೆ ಗೂಡ್ಸ್ ರೈಲು ಓಡಾಡುವುದರಿಂದ ಜನರಿಗೆ ಕಿರಿಕಿರಿವುಂಟಾಗುತ್ತಿದೆ. ವಾಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಯಾವಾಗಂದ್ರೆ ಆವಾಗ ರೈಲು ಗೇಟ್ ಹಾಕುವುದರಿಂದ ಸ್ಥಳಿಯರು ಯಾತನೆ ಅನುಭವಿಸುತ್ತಿದ್ದಾರೆ. ಅದರಲ್ಲೂ ನಿನ್ನೆ ಬರೋಬ್ಬರಿ ಒಂದುವರೆ ತಾಸು ರೈಲು ತಡೆಗೋಡೆಯಂತೆ ನಿಂತಿತ್ತು. ಜನರು ಪ್ರಾಣದ ಹಂಗು ತೊರೆದು ರೈಲು ಕೆಳಗಡೆಯಿಂದ ಪಾರಾಗುತ್ತಿದ್ದ ಅಪಾಯಕಾರಿ ದೃಶ್ಯ ಎದೆ ಝಲ್ ಅನಿಸುವಂತಿದ್ದವು.

ಸಿಮೆಂಟ್ ನಗರಿ ಅಂತಾನೇ ಹೆಸರು ವಾಸಿಯಾಗಿರುವ ವಾಡಿ ಪಟ್ಟಣದಲ್ಲಿನ ಎಸಿಸಿ ಸಿಮೆಂಟ್ ಕಂಪನಿಯಿಂದ ಹತ್ತಾರು ಕುಟುಂಬಗಳಿಗೆ ಕೆಲಸ ಸಿಕ್ಕು ನೆಮ್ಮದಿಯ ಜೀವನ ನಡೆಸುತ್ತಿವೆ. ಆದ್ರೆ ಅದೆ ಕಂಪನಿಯ ನಿಷ್ಕಾಳಜಿಯಿಂದ ಇಡೀ ಊರಿನ ಜನರು ನರಕಯಾತನೆ ಅನುಭವಿಸುವಂತಾಗಿದೆ. ಹೌದು, ಎಸಿಸಿ ಕಂಪನಿಗೆ ಗೂಡ್ಸ್ ರೈಲಿನಲ್ಲಿ ಕಲ್ಲಿದ್ದಲು ಸರಬರಾಜು ಮಾಡಲಾಗುತ್ತದೆ. ಹೀಗೆ ಬರುವ ರೈಲುಗಳು ವಾಡಿ ಪಟ್ಟಣದ ಬಸವೇಶ್ವರ ವೃತ್ತದಿಂದ ಹಾಯ್ದು ಹೋಗ್ತವೆ. ಇದು ಕಲಬುರಗಿ-ವಾಡಿ ಪ್ರಮುಖ ರಸ್ತೆ ಆದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು, ಜನರು ಓಡಾಟ ಇಲ್ಲಿದೆ. ಆದ್ರೆ ಯಾವಾಗಂದ್ರೆ ಆವಾಗ ರೈಲು ಗೇಟು ಹಾಕುವುದರಿಂದ ನಿತ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಅದರಲ್ಲೂ ನಿನ್ನೆ ಬರೋಬ್ಬರಿ ಒಂದೂವರೆ ಗಂಟೆಗಳ ಕಾಲ ಅಡ್ಡಗೋಡೆಯಂತೆ ರೈಲು ನಿಂತಲ್ಲೆ ನಿಂತು ಜನ ತೀವ್ರ ತೊಂದರೆ ಅನುಭವಿಸಿದ್ದಾರೆ. ಎಸಿಸಿ ಕಂಪನಿಗೆ ಕಲ್ಲಿದ್ದಲು ಹೊತ್ತು ತರುತ್ತಿದ್ದ ಗೂಡ್ಸ್ ರೈಲಿಗೆ ತಲಾ 62 ಟನ್ ತೂಕದ 55 ಬೋಗಿಗಳಿದ್ದವು. ಒಂದೇ ಎಂಜೀನ್ ಎಲ್ಲಾ ಬೋಗಿಗಳನ್ನು ಎಳೆಯುತ್ತಿತ್ತು. ಭಾರಿ ಪ್ರಮಾಣದ ಭಾರ ಎಳೆಯಲಾಗದೆ ಇಂಜೀನ್ ಚಲಿಸುತ್ತಿರುವಾಗಲೇ ಕೆಟ್ಟು ನಿಂತಿತ್ತು. ಅತ್ತ ಮುಂದೆಯೂ ಸಾಗದೆ ಇತ್ತ ಹಿಂದಕ್ಕೂ ಹೋಗದೆ ವಾಡಿ-ಕಲಬುರಗಿ ಮಾರ್ಗದ ರಸ್ತೆಗೆ ಅಡ್ಡಲಾಗಿ ತಡೆಗೋಡೆಯಾಗಿ ನಿಂತಿತು. ಮತ್ತೊಂದು ಇಂಜಿನ್ ತಂದು ಎಳೆಯುವಷ್ಟರಲ್ಲಿ ಬರೋಬ್ಬರಿ ಒಂದುವರೆ ತಾಸು ಕಳೆದಿತ್ತು. ದಾರಿಯಲ್ಲಿ ನಿಂತು ನಿಂತು ಕೆಲ ಬೈಕ್ ಕಾರುಗಳು ವಾಪಸ್ ಹೋದವು.. ರೋಗಿಗಳನ್ನು ಹೊತ್ತು ಆಸ್ಪತ್ರೆಗೆ ತೆರಳುತ್ತಿದ್ದ ಆ್ಯಂಬೂಲೆನ್ಸ್ ಕೂಡಾ ಅನಿವಾರ್ಯವಾಗಿ ವಾಪಸ್ ಹೋಯಿತು.‌


ಒಟ್ನಲ್ಲಿ ಎಸಿಸಿ ಕಂಪನಿಗೆ ಓಡಾಡುವ ರೈಲುಗಳಿಂದ ಜನರು ಪರದಾಡುವಂತಾಗಿದೆ. ಎಸಿಸಿ ಕಂಪನಿ‌ ಮನಸ್ಸು ಮಾಡಿದ್ರೆ ಜನರಿಗೆ ಅಂಡರ್ ಪಾಸ್ ಅಥವಾ ಓವರ್ ಬ್ರಿಡ್ಜ್ ನಿರ್ಮಾಣ ಮಾಡಿಕೊಟ್ಟು ಸುಲಭ ಸಂಚಾರಕ್ಕೆ ಅನುವು ಮಾಡಬಹುದಿತ್ತು. ಆದ್ರೆ ಕಂಪನಿಯ ನಿಷ್ಕಾಳಜಿ ಜನರ ಪ್ರಾಣ ಹಿಂಡುತ್ತಿದೆ. ಇನ್ನಾದ್ರೂ ರೈಲ್ವೆ ಇಲಾಖೆ ಎಸಿಸಿ ಕಂಪನಿ ಜನರ ಗೋಳು ತಪ್ಪಿಸುವ ಕೆಲಸಕ್ಕೆ ಮುಂದಾಗಲಿ ಅನ್ನೋದು ಸ್ಥಳಿಯರ ಆಗ್ರಹವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button