Breaking NewsLatestಮೆಟ್ರೋರಾಜ್ಯ

ಗಣೇಶೋತ್ಸವ ಆಚರಣೆ; ಭಾನುವಾರ ತೀರ್ಮಾನ ಎಂದ ಸಿಎಂ

ಬೆಂಗಳೂರು: ಸಂಭವನೀಯ ಕೋವಿಡ್ ಮೂರನೇ ಅಲೆ ಆತಂಕದ ನಡುವೆ ರಾಜ್ಯದಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ಸಂಬಂಧ ಭಾನುವಾರ ನಡೆಯಲಿರುವ ತಜ್ಞರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಗಡಿಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಕೊರೊನಾ ಪರಿಸ್ಥಿತಿ ಕುರಿತು ನಡೆಸಿದ ವಿಡಿಯೋ ಕಾನ್ಫೆರೆನ್ಸ್ ಸಭೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಈ ವಿಷಯ ತಿಳಿಸಿದರು.

ವಿಡಿಯೋಕಾನ್ಫೆರೆನ್ಸ್ ಮೂಲಕ ಇಂದು ನಡೆದ ಸಭೆಯಲ್ಲಿ ಚಾಮರಾಜನಗರ,ಕೊಡಗು, ದಕ್ಷಿಣಕನ್ನಡ,ಉಡುಪಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಕೊರೋನಾ ಪರಿಸ್ಥಿತಿ ಕುರಿತು ಪರಾಮರ್ಶಿಸಲಾಯಿತು. ಕಾಸರಗೋಡಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ದಿನ ಮಾತ್ರ ಪ್ರಕರಣಗಳು ಹೆಚ್ಚಾಗಿವೆ. ಉಳಿದಂತೆ ಕಳೆದ ಜುಲೈ 30ರಿಂದ ಈವರೆಗೆ ಅಲ್ಲಿ ಸ್ಥಿತಿ ಸಾಮಾನ್ಯವಾಗಿದೆ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲೂ ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿವೆ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಎಲ್ಲೆಡೆ ಕೋವಿಡ್ ಪರೀಕ್ಷೆ, ಲಸಿಕೆ ಹಾಕುವ ಪ್ರಮಾಣವನ್ನು ಹೆಚ್ಚಿಸುವಂತೆ ವಿಶೇಷವಾಗಿ ಗಡಿ ಜಿಲ್ಲೆಗಳ 20 ಕಿ.ಮಿ ವ್ಯಾಪ್ತಿಯನ್ನು ಕಟ್ಟುನಿಟ್ಟಾಗಿ ಕವರ್ ಮಾಡುವಂತೆ ಸೂಚಿಸಲಾಗಿದೆ. ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ಪ್ರಮಾಣವನ್ನು ಈಗಿರುವುದಕ್ಕಿಂತ ಶೇ.35ರಷ್ಟು ಪ್ರಮಾಣ ಹೆಚ್ಚಿಸಬೇಕೆಂದು ಸೂಚಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button