ಮಾಜಿ ಸಚಿವ ದಾರಾ ಸಿಂಗ್ ಚೌಹಾಣ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

ಲಖ್ನೋ: ಕೇವಲ ಎರಡು ದಿನಗಳ ಹಿಂದೆ ಯೋಗಿ ಆದಿತ್ಯನಾಥ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ದಾರಾ ಸಿಂಗ್ ಚೌಹಾಣ್ ಇಂದು ವಿಧ್ಯುಕ್ತವಾಗಿ ಸಮಾಜವಾದಿ ಪಕ್ಷ ಸೇರಿಕೊಂಡಿದ್ದಾರೆ. ಸಂಪುಟಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷ ಸೇರಿದ ಮೂರನೇ ಸಚಿವರಾಗಿದ್ದಾರೆ. ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ದಾರಾ ಸಿಂಗ್ ಚೌಹಾನ್ ಶುಕ್ರವಾರ ಹೊಸ ಪಕ್ಷ ಸೇರಿದ್ದಾರೆ.
ನಂತರ ಮಾತನಾಡಿದ ಅವರು, 2017ರ ಲ್ಲಿ ಬಿಜೆಪಿ ಸರ್ಕಾರ ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಅಂದರೆ ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದರೂ ಕೆಲವೇ ಕೆಲವು ಜನರಿಗೆ ಮಾತ್ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸವಲತ್ತುಗಳು ದೊರೆತಿದ್ದು ಬಹುಸಂಖ್ಯಾತರು ಇದರಿಂದ ವಂಚಿತರಾಗಿದ್ದಾರೆ ಎಂದು ದೂರಿದರು.
ಸಂವಿಧಾನದ ಹೆಸರಿನಲ್ಲಿ ಅಧಿಕಾರ ಹಿಡಿದವರು ಈಗ ಸಂವಿಧಾನವನ್ನೇ ತಿರುಚುವ, ಮೂಲೆಗುಂಪು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವರು ಕಿಡಿಕಾರಿದರು. ಇದಕ್ಕೂ ಮೊದಲು ಮಾಜಿ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಸಂಪುಟಕ್ಕೆ ರಾಜೀನಾಮೆ ನೀಡಿ ಸೈಕಲ್ ಪಕ್ಷವನ್ನು ಅಪ್ಪಿಕೊಂಡಿದ್ದರು.
