ರಾಮಕೃಷ್ಣ ಹೆಗಡೆ ರಾಜ್ಯ ಕಂಡ ಮುತ್ಸದ್ದಿ ನಾಯಕರು: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಮಕೃಷ್ಣ ಹೆಗಡೆಯವರು ರಾಜ್ಯ ಕಂಡ ಮುತ್ಸದ್ದಿ ನಾಯಕರು. ಮೌಲ್ಯಾಧಾರಿತ ರಾಜಕೀಯದ ಪ್ರವರ್ತಕರು. ದಕ್ಷ ಆಡಳಿತಕ್ಕೆ, ಪ್ರಾಮಾಣಿಕತೆಗೆ ಅವರು ಮಾದರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ರಾಮಕೃಷ್ಣ ಹೆಗಡೆ ಅವರ 95ನೇ ಜನ್ಮದಿನದಂದು ಭಾವಪೂರ್ಣ ನಮನ ಸಲ್ಲಿಸಿದರು. ಕರ್ನಾಟಕದಲ್ಲಿ ದೀರ್ಘಕಾಲದ ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಿ ಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ರಾಜ್ಯದಲ್ಲಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲಿ ಪ್ರಭಾವಿ ನಾಯಕರಾಗಿದ್ದರು. ಕೇಂದ್ರದಲ್ಲಿ ವಿಪಿ ಸಿಂಗ್ ನೇತ್ರತ್ವದ ಸರ್ಕಾರ ರಚನೆಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು ಎಂದು ತಿಳಿಸಿದರು.
ಹೆಗಡೆಯವರ ಜೊತೆ ನನ್ನ ತಂದೆ ಎಸ್. ಆರ್. ಬೊಮ್ಮಾಯಿ ಅವರ ಸ್ನೇಹ ಸಂಬಂಧ ಅವರ ಜೀವನದ ಅಂತ್ಯದ ವರೆಗೂ ಇತ್ತು. ಹೆಗಡೆಯವರ ಸಂಪುಟದಲ್ಲಿ ಸಚಿವರಾಗಿ ಜನತಾದಳವನ್ನು ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಹೆಗಡೆಯವರು ಮತ್ತು ಬೊಮ್ಮಾಯಿಯವರು ಅವಿಶ್ರಾಂತವಾಗಿ ಶ್ರಮಿಸಿದ್ದರು ಎಂದರು.
ರಾಮಕೃಷ್ಣ ಹೆಗಡೆಯವರ ಕೊಡುಗೆ ರಾಜ್ಯಕ್ಕೆ ಅಪಾರ. ಮುಖ್ಯವಾಗಿ ಆಡಳಿತ ವಿಕೇಂದ್ರೀಕರಣಕ್ಕೆ ಅವರು ಮಾಡಿದ ಪಂಚಾಯತ್ ರಾಜ್ ವ್ಯವಸ್ಥೆ ದೇಶದಲ್ಲಿ ಅನುಕರಣೀಯ ವೆಂದು ಪ್ರಶಂಸೆಗೆ ಪಾತ್ರವಾಗಿದೆ. ನನ್ನ ತಂದೆಯವರೊಂದಿಗೆ ಹೆಗಡೆಯವರ ಸಂಬಂಧ ಅವಿಸ್ಮರಣೀಯ. ಅತ್ಯಂತ ಧನ್ಯತೆಯಿಂದ ಸ್ಮರಿಸಿ ಕೊಳ್ಳುತ್ತೇನೆ.” ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
