‘ಸುಳ್ಳಿನ ಸಿದ್ದಪುರುಷ’ನಿಂದ ಭಾಷೆ-ಸಂಸ್ಕೃತಿ ಕುರಿತು ಪಾಠವೇ : ಸಿದ್ದರಾಮಯ್ಯಗೆ ಹೆಚ್ಡಿಕೆ ತಿರುಗೇಟು

ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ಟ್ವೀಟ್ ವಾರ್ ತಾರಕಕ್ಕೇರಿದೆ. ನಿನ್ನೆ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದ ಸಿದ್ದರಾಮಯ್ಯಗೆ ಇಂದು ಟ್ವಿಟರ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಸಿದ್ದುಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಹೆಚ್ಡಿಕೆ, ಸ್ವಯಂ ಘೋಷಿತ ಸಂವಿಧಾನ ಪಂಡಿತ ಸಿದ್ದರಾಮಯ್ಯ ನಮ್ಮ ಪಕ್ಷ ಮತ್ತು ನಮ್ಮ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಮಾತು ಆಡಿದ ಮೇಲೆ ಅದನ್ನು ದಕ್ಕಿಸಿಕೊಳ್ಳುವ ಯೋಗ್ಯತೆಯೂ ಇರಬೇಕಲ್ಲವೇ? ಆ ಯೋಗ್ಯತೆ ಅವರಿಗಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕಿಡಿಕಾರಿದ್ದಾರೆ.
ಸುಖಾಸುಮ್ಮನೆ ಅವರ ಬಗ್ಗೆ ಮಾತನಾಡುವ ತೆವಲು ನಂಗಂತೂ ಇಲ್ಲ. ನಮ್ಮ ಪಕ್ಷದಿಂದ ಎಗರಿಸಿಕೊಂಡು ಹೋದ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾದರೆ ನಮ್ಮ ಪಕ್ಷದ ಬಗ್ಗೆ ಏಕೆ ಮಾತನಾಡಬೇಕು? ಜೆಡಿಎಸ್ ಪಕ್ಷವನ್ನು ತುಮಕೂರಿನಿಂದ ಓಡಿಸಿ ಎಂದಿದ್ದು ಯಾವ ಸಂಸ್ಕೃತಿ? ಪ್ರಜಾಪ್ರಭುತ್ವದಲ್ಲಿ ಒಂದು ಜಿಲ್ಲೆಯಿಂದಲೇ ಒಂದು ಪಕ್ಷವನ್ನು ಓಡಿಸಿ ಎನ್ನುವುದು ಎಂಥಾ ರಾಜಕಾರಣ? ಲಂಗು ಲಗಾಮು ಇಲ್ಲದೆ ನಾಲಿಗೆ ಜಾರುವ ಇಂಥ ಜನರಿಂದ ನಾನು ಭಾಷೆ, ಸಂಸ್ಕೃತಿ ಬಗ್ಗೆ ಕಲಿಯಬೇಕಿಲ್ಲ. ‘ಸುಳ್ಳಿನ ಸಿದ್ದಪುರುಷ’ನಿಂದ ಭಾಷೆ-ಸಂಸ್ಕೃತಿ ಕುರಿತು ಪಾಠವೇ? ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ ಅನ್ನುತ್ತಾರೆ. ಮಾತೆತ್ತಿದರೆ ಕುಮಾರಸ್ವಾಮಿಯದ್ದೇ ಜಪ! ಜೊತೆಗೆ ಜೆಡಿಎಸ್ ಬಗ್ಗೆ ವಿಷ ಕಾರುವುದು ಸುಳ್ಳಾ? ಅವರ ಹೇಳಿಕೆಗಳನ್ನು ಇಡೀ ರಾಜ್ಯವೇ ಕೇಳಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಕಂಡರೆ ಕುಮಾರಸ್ವಾಮಿಗೆ ಭಯ! ಅಂತಾರೆ. ಇದು ಭ್ರಮೆಯ ಪರಮಾವಧಿ. ಮತ್ತೆ ಸಿಎಂ ಆಗಲ್ಲ ಎಂದು ಖಚಿತವಾದ ಮೇಲೆ ಹತಾಶೆ, ಅಸಹನೆಯ ಬೆಂಕಿಯಲ್ಲಿ ಬೇಯುತ್ತಿದ್ದಾರೆ, ಪಾಪ. ಇದು ವಿಪರೀತಕ್ಕೆ ಹೋಗಿದೆ ಎನ್ನುವುದಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಅವರು ಕೊಟ್ಟ ಹೇಳಿಕೆಗಳೇ ಸಾಕ್ಷಿ. ತುಮಕೂರು ಜಿಲ್ಲೆಯಿಂದ ಓಡಿಸಿ, ಬಿಜೆಪಿಯ ಬಾಲಂಗೋಚಿ; ಇಂತಹ ನುಡಿಮುತ್ತುಗಳು ‘ಸ್ವಯಂ ಘೋಷಿತ ಸಂವಿಧಾನ ಪಂಡಿತ’ನ ರಾಜಕೀಯ ಫಜೀತಿಯ ಪರಾಕಾಷ್ಠೆ. ಯಾರ ಭಯ ಯಾರಿಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ನಿಜ. ಚುನಾವಣೆಯಲ್ಲಿ ನಮ್ಮ ತಂದೆ ಸೋತಿದ್ದಾರೆ. ನನ್ನ ಅಣ್ಣ ಸೋತಿದ್ದಾರೆ, ನಾನೂ ಸೋತಿದ್ದೇನೆ. ಸೋತ ಮೇಲೆ ನಾವ್ಯಾರೂ ಅಧೀರರಾಗಿಲ್ಲ. ಸೋತಿದ್ದಕ್ಕೆ ನಾವು ಕಣ್ಣೀರು ಹಾಕಿಲ್ಲ. ಸಿದ್ದಹಸ್ತರ ಕಣ್ಣೀರ ಕೋಡಿಯನ್ನು ಕಂಡ ದೇವೇಗೌಡರು ಇನ್ನೂ ನಮ್ಮ ಜತೆ ಇದ್ದಾರೆ ತಿಳಿಸಿದ್ದಾರೆ.
ಇನ್ನು ಕಮೀಷನ್ ವ್ಯವಹಾರದಲ್ಲಿ ನಾನು ನೀಟ್, ಕ್ಲೀನ್ ಎನ್ನುತ್ತಿದ್ದಾರೆ ಪ್ರತಿಪಕ್ಷ ನಾಯಕರು. ಐದು ವರ್ಷ ಸಿಎಂ ಆಗಿದ್ದರೂ ನಾನು ಕ್ಲೀನ್ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಹಾಗಾದರೆ, ಇವತ್ತಿಗೂ ಕೇಳಿಸುತ್ತಿರುವ ‘ ಅರ್ಕಾವತಿ ‘ ಆರ್ತನಾದಕ್ಕೆ ಕಾರಣರು ಯಾರು? ಈ ಸತ್ಯ ಆಚೆ ಬಿದ್ದರೆ ಆ ಸಿದ್ದಹಸ್ತರು ಮುಖವನ್ನು ಎಲ್ಲಿ ಇಟ್ಟುಕೊಳ್ಳುತ್ತಾರೆ? ದೇವರಾಜ ಅರಸು ಅವರ ನಂತರ ‘ ಐದು ವರ್ಷದ ಮುಖ್ಯಮಂತ್ರಿ ‘ ಎಂದು ಹೇಳಿಕೊಳ್ಳುವ ಅಪರ ಸಿದ್ದಪುರುಷರ ಪಾಡೇನು? ‘ ಐದು ವರ್ಷದ ಮುಖ್ಯಮಂತ್ರಿ ‘ ಎಂಬ ಪ್ರಭಾವಳಿಯ ಕಥೆ ಏನು? ಅಂತಾ ಸರಣಿ ಟ್ವೀಟ್ಗಳನ್ನ ಮಾಡಿ ಪ್ರಶ್ನಿಸಿದ್ದಾರೆ.
