Breaking NewsLatestಕ್ರೈಂಜಿಲ್ಲಾ ಸುದ್ದಿಮೈಸೂರು
ಮನೆಯಲ್ಲಿ ಒಲೆ ಹಚ್ಚುವಾಗ ಬೆಂಕಿ ಅವಘಡ ಪತಿ ಸಾವು, ಪತ್ನಿಗೆ ಗಾಯ

ಮೈಸೂರು: ಅಗ್ನಿ ಅವಘಡದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವನ್ನಪ್ಪಿ, ಆತನ ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ನಂದಿನಿ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಪತಿ ಶಿವಣ್ಣ ಸಾವನ್ನಪ್ಪಿದ್ದರೆ ಪತ್ನಿ ನಾಗಮ್ಮ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯಗಳ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಬೆಳಗ್ಗೆ ನೀರು ಕಾಯಿಸಲು ಶಿವಣ್ಣ ಒಲೆ ಹಚ್ಚುವಾಗ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿತ್ತು.
ಈ ವೇಳೆ ಪತಿಯನ್ನು ಬಚಾವ್ ಮಾಡಲು ಬಂದ ಪತ್ನಿ ನಾಗಮ್ಮ ಅವರಿಗೂ ಗಂಭೀರವಾಗಿ ಗಾಯವಾಗಿದೆ. ಬೆಂಕಿಯಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನೂ ಸ್ಥಳೀಯರು ರಕ್ಷಣೆ ಮಾಡಿ, ಗಾಯಗೊಂಡ ದಂಪತಿಯನ್ನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೇ ಶಿವಣ್ಣ ಸಾವನ್ನಪ್ಪಿದ್ದರೆ, ನಾಗಮ್ಮರಿಗೆ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
