ಫೋನ್ ಮಾಡಿ ಹಣದ ಬೇಡಿಕೆ ಇಟ್ಟ ನಕಲಿ ಎಸಿಬಿ: ರೋಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ರೋಣ: ಫೋನ್ ಕರೆ ಮಾಡಿ ಹಣದ ಬೇಡಿಕೆ ಇಟ್ಟ ನಕಲಿ ಎಸಿಬಿ ಅಧಿಕಾರಿಗಳ ವಿರುದ್ಧ ರೋಣ ತಹಸೀಲ್ದಾರ ಜೆ.ಬಿ.ಜಕ್ಕನಗೌಡ ರೋಣ ಪೊಲೀಸ್ ಠಾಣೆಯಲ್ಲಿ ಗುರುವಾರ ಕೇಸ್ ದಾಖಲಿಸಿದ್ದಾರೆ.
ನಿಮ್ಮ ವಿರುದ್ಧ ಎಸಿಬಿಗೆ ದೂರು ಬಂದಿದೆ. ನಿಮ್ಮನ್ನು ವಿಚಾರಣೆ ಮಾಡಬೇಕು, ದೂರಿನ ಪ್ರಕಾರ ನಿಮ್ಮ ಮೇಲೆ ಪ್ರಕರಣ ದಾಖಲಿಸಲಾಗಿದೆ. ನೀವು ನಮ್ಮೊಂದಿಗೆ ಹೊಂದಿಕೊಂಡರೆ ಕೇಸ್ ಕ್ಲೋಸ್ ಮಾಡುತ್ತೇವೆ, ಇಲ್ಲವಾದರೆ ಟ್ರ್ಯಾಪ್ ಮಾಡಲಾಗುವುದು’ ಎಂದು ಹೆದರಿಸಿದ್ದಾರೆ. ಗದಗ ಎಸಿಬಿ ಡಿಎಸ್‌ಪಿ ಮಲ್ಲಾಪೂರ ಎಂದು ಹೆಸರು ಹೇಳಿ ‘ನಿಮ್ಮ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ದೂರು ಬಂದಿದೆ, ನೀವು ಇರುವ ಜಾಗದಿಂದ ಬೇರೆ ಕಡೆ ಹೋಗಿರಿ, ಸಂಜೆ 5 ಗಂಟೆಯ ಒಳಗೆ ನಿಮ್ಮ ಕೇಸ್‌ನ್ನು ಸಿ ರಿಪೋರ್ಟ್ ಮಾಡಿ ದೂರನ್ನು ಮುಕ್ತಾಯ ಮಾಡುತ್ತೇನೆ’ ಎಂದು ಹಣದ ಬೇಡಿಕೆ ಇಟ್ಟಿದ್ದಾರೆ.
ನಿಮಗೆ ಸಹಾಯ ಮಾಡಲು ಕರೆ ಮಾಡಿದ್ದೇನೆ. ಹಣವನ್ನು ಫೋನ್ ಪೇ ಇಲ್ಲವೇ ಗೂಗಲ್ ಪೇ ಮಾಡಿ. ನಿಮ್ಮ ಮನೆ- ಕಚೇರಿ ಮೇಲೆ ದಾಳಿ ಮಾಡಲು ಕೇಂದ್ರ ಕಚೇರಿಯಿಂದ ಆದೇಶ ಬಂದಿದೆ. ದಸ್ತಗಿರಿ ಮಾಡುತ್ತೇವೆ, ಇದು ಬೇಕಾ ನಿಮಗೆ? ಬೆಂಗಳೂರಿನ ನಮ್ಮ ಇಲಾಖೆಯ ಐಜಿಪಿ ಸಾಹೇಬರು ತಮ್ಮ ಗೆಳೆಯನೊಂದಿಗೆ ವಿದೇಶಕ್ಕೆ ಹೋಗುತ್ತಿದ್ದು, ಎರಡು ಫ್ಲೈಟ್ ಟಿಕೆಟ್ ಬುಕ್ ಮಾಡಲು 1 ಲಕ್ಷ 30 ಸಾವಿರ ರೂ. ಹಣ ಹಾಕಿ’ ಎಂದು ಫೋನ್ ಪೇ, ಗೂಗಲ್ ಪೇ ನಂಬರ್ ಸಹ ನೀಡಿದ್ದಾರೆ. ಹಣ ನೀಡದಿದ್ದರೆ ಮುಂದಿನ ಪರಿಣಾಮ ಎದುರಿಸುತ್ತೀರಿ ಎಂದು ಬೆದರಿಕೆ ಹಾಕಿದ್ದಾರೆ. ದೂರು ದಾಖಲಿಸಿಕೊಂಡ ಪಿಎಸ್‌ಐ ವಿನೋದ ಪೂಜಾರಿ ತನಿಖೆ ನಡೆಸಿದ್ದಾರೆ.
