ಮಸೀದಿ, ಚರ್ಚ್, ದೇವಸ್ಥಾನದ ವಿಚಾರ: ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ ಕೆ.ಹೆಚ್. ಮುನಿಯಪ್ಪ

ಕೋಲಾರ: ಭಾರತದ ಸಂವಿಧಾನದಲ್ಲಿ ಕಟ್ಟ ಕಡೆಯ ಪ್ರಜೆಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ. ಜಾತ್ರೆಗಳಲ್ಲಿ ಭಾಗವಹಿಸಬಹುದು, ದೇವಸ್ಥಾನ, ಉರುಸು, ಮಸೀದಿ, ಚರ್ಚ್‌ಗಳಿಗೆ ಹೋಗಲು ಅವಕಾಶವಿದೆ ಅದು ಅವರವರ ವೈಯಕ್ತಿಕ ತೀರ್ಮಾನ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದಲ್ಲಿ ಸ್ವಷ್ಟವಾಗಿ ತಿಳಿಸಿದ್ದಾರೆ ಇದನ್ನು ರಾಜಕೀಯಕ್ಕಾಗಿ ಮತ್ತು ಒಂದು ಪಕ್ಷದ ಸಂಘಟನೆಗಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಕೇಂದ್ರದ ಮಾಜಿ ಸಚಿವ ಕೆ ಹೆಚ್ ಮುನಿಯಪ್ಪ ಮುಸಲ್ಮಾನರು ಜಾತ್ರೆಗಳಲ್ಲಿ ಭಾಗವಹಿಸಲು ಅಡ್ಡಿ ಪಡಿಸಬಾರದು ಎಂದು ಖಾರವಾಗಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಾತ್ರೆಗಳಲ್ಲಿ ಭಾಗವಹಿಸುವುದು, ಅಂಗಡಿ ಹಾಕಿಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದೆ. ಬಿಜೆಪಿ ಸರ್ಕಾರ ಈ ರೀತಿ ಮಾಡುವ ಕೆಲಸಗಳಿಂದ ಸಂವಿಧಾನಕ್ಕೆ ಅಪಮಾನ ಮಾಡಿದಂತೆ ಆಗುತ್ತದೆ ಎಂದರು. ಭಾರತದ ಪ್ರಜೆಗೆ ಸಮಾಜದಲ್ಲಿ ಸಮಾನ ಅವಕಾಶ ಇರುವುದರಿಂದ ವಿಭಿನ್ನವಾಗಿ ನೋಡಬಾರದು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಗಾಂಧೀಜಿಯವರ ಜೊತೆಯಲ್ಲಿ ಹಿಂದೂ ಮುಸಲ್ಮಾನರು ಜೈನರು ಪಾರ್ಶರು, ಸಿಖ್ಖರು, ಕ್ರಿಶ್ಚಿಯನ್ನರು ಒಟ್ಟಾಗಿ ದುಡಿಯುವ ಮೂಲಕ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಶತಮಾನಗಳಿಂದ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದೇವೆ. ಇದರಿಂದ ಭಾರತ ದೇಶಕ್ಕೆ ಮತ್ತು ಅಭಿವೃದ್ದಿಗೆ ಒಳ್ಳೆಯದು ಎಂದರು.
ಕ್ಲಾಕ್ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸುವ ವಿಷಯದಲ್ಲಿ ಒಬ್ಬ ಸಂಸದರಾಗಿ ಅಧಿಕಾರವನ್ನು ಕೈಗೆತ್ತಿಕೊಳ್ಳಬಾರದು ಸಂಸದ ಮತ್ತು ಶಾಸಕನಾಗಿ ಆಯ್ಕೆಯಾದವನಿಗೆ ಮಾಡಬೇಕಿದ್ದ ಕೆಲಸಗಳು ಸಾಕಷ್ಟು ಇವೆ. ನಗರಸಭೆ ಹಾಗು ತಾಲ್ಲೂಕು ಮಟ್ಟದಲ್ಲಿ ಇರುವ ವಿವಾದಗಳನ್ನು ಬಗೆಹರಿಸಲು ತಾಲ್ಲೂಕು ಆಡಳಿತ, ನಗರಸಭೆ ಮತ್ತು ಜಿಲ್ಲಾಡಳಿತ ಇರುತ್ತವೆ. ಅವರ ಇತಿಮಿತಿಗೆ ಬರುವ ಕೆಲಸಗಳನ್ನು ಅವರು ಮಾಡುತ್ತಾರೆ. ಪ್ರೇರಪಣೆ ಮಾಡಿ ಜನರ ಮನಸ್ಸಿಗೆ ಘಾಸಿ ಆಗುವ ಕೆಲಸಗಳನ್ನು ಮಾಡಬಾರದು, ಸಂವಿಧಾನ ಬಾಹಿರ ಕೆಲಸಗಳಿಗೆ ಯಾರೂ ಕೈ ಹಾಕಬಾರದು ರಾಷ್ಟ್ರ ಧ್ವಜ ಹಾರಿಸಲು ಯಾರು ಬೇಡ ಎನ್ನುತ್ತಾರೆ ಆ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತದೆ. ನಗರಸಭೆ ಅಧ್ಯಕ್ಷರು ಮತ್ತು ಕಮೀಷನರ್‌ಗೆ ಸಂಬಂಧಿಸಿದ ಕೆಲಸ ಅದು ಆದರೆ ಒಂದು ಪಕ್ಷದ ಮುಖಂಡರು ಮತ್ತು ರಾಜಕಾರಣಿಗಳು ಮಾಡುವ ಕೆಲಸ ಇದಲ್ಲ ಪಕ್ಷದ ಸಂಘಟನೆಗಾಗಿ ಮತ್ತು ರಾಜಕಾರಣಕ್ಕಾಗಿ ಕೋಮು ಗಲಭೆ ಸೃಷ್ಟಿಸುವಂತಹ ಕೆಲಸಕ್ಕೆ ಕೈ ಹಾಕಬಾರದು ಎಂದರು.
ಹಿಂದೂ, ಮುಸಲ್ಮಾನ್ ಮತ್ತು ಕ್ರೈಸ್ತರಿಗೆ ನೋವಾಗುವ ರೀತಿಯಲ್ಲಿ ಜನಪ್ರತಿನಿಧಿಗಳು ನಡೆದುಕೊಳ್ಳಬಾರದು. ೩೦ ವರ್ಷಗಳ ಹಿಂದೆ ೯೧ ಮತ್ತು ೯೨ ರಲ್ಲಿ ಮೂರು ತಿಂಗಳ ಕಾಲ ಕೋಲಾರ ನಗರದಲ್ಲಿ ಏನು ಕಷ್ಟಗಳು ನಡೆಯಿತು ಎಂಬುದು ಅನುಭವಿಸಿದವರಿಗೆ ಗೊತ್ತಾಗುತ್ತದೆ. ಆದ್ದರಿಂದ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಕ್ಲಾಕ್ ಟವರ್ ವಿಷಯದ ಬಗ್ಗೆ ಸಂಸದರ ವಿರುದ್ದ ಕಿಡಿಕಾರಿದ ಕೆ ಹೆಚ್ ಮುನಿಯಪ್ಪ ರಾಷ್ಟ್ರ ಧ್ವಜ ಹಾರಿಸಲು ಅಧಿಕಾರಿಗಳಿದ್ದಾರೆ ಅವರ ಗಮನಕ್ಕೆ ತರಬೇಕು ಜನಪ್ರತಿನಿಧಿಗಳು ಕೈಗೆತ್ತಿಕೊಳ್ಳಬಾರದು ಇತಿ ಮಿತಿಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
