Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಶಿವಮೊಗ್ಗಸುದ್ದಿ

ಹರ್ಷ ಶವಯಾತ್ರೆಯಲ್ಲಿ ಈಶ್ವರಪ್ಪ, ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಶಿವಮೊಗ್ಗದಲ್ಲಿ ಭಾನುವಾರ ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷ ಶವ ಯಾತ್ರೆಗೆ ಅವಕಾಶ ಸರಿಯಲ್ಲ ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹಿಂದಿನ ದಿನವೇ 144ನೇ ಸೆಕ್ಷನ್ ಜಾರಿಯಲ್ಲಿದ್ದರೂ ಮೃತನ ಶವಯಾತ್ರೆಗೆ ಪೊಲೀಸ್ ಇಲಾಖೆ ಅವಕಾಶ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಲ್ಲಿ ಶಿವಮೊಗ್ಗದಲ್ಲಿ 3 ಕೊಲೆಗಳು ನಡೆದಿವೆ. ಶಿವಮೊಗ್ಗ ಗೃಹ ಸಚಿವರ ತವರು ಜಿಲ್ಲೆ, ಅಲ್ಲೇ ಈ ರೀತಿ ಕೊಲೆಗಳು ನಿರಂತರವಾಗಿ ನಡೆಯುತ್ತವೆ ಎಂದರೆ ಹೇಗೆ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದರು.

ಸರ್ಕಾರಿ ಪ್ರಾಯೋಜಿತ ಶವಯಾತ್ರೆ

ಈ ಶವಯಾತ್ರೆಯಲ್ಲಿ ಸಚಿವ ಈಶ್ವರಪ್ಪ, ಸ್ಥಳೀಯ ಸಂಸದ ರಾಘವೇಂದ್ರ ಕೂಡ ಭಾಗವಹಿಸಿದ್ದರು, ಅಂದರೆ ಈ ಶವಯಾತ್ರೆಯನ್ನು ರಾಜ್ಯ ಸರ್ಕಾರದ ಪ್ರಾಯೋಜಿತ ಶವಯಾತ್ರೆ ಎನ್ನಬೇಕಾಗುತ್ತದೆ. ತಮ್ಮದೇ ಸರ್ಕಾರ 144 ಸೆಕ್ಷನ್ ಹಾಕಿದೆ, ಸರ್ಕಾರದ ಸಚಿವರ ಎದುರೇ ಕಲ್ಲುತೂರಾಟ ನಡೆದಿದೆ, ಅಂಗಡಿ, ವಾಹನಗಳಿಗೆ ಬೆಂಕಿ ಹಾಕಲಾಗಿದೆ, ಜನ ಗುಂಪು ಗುಂಪಾಗಿ ಕತ್ತಿ, ತಲ್ವಾರ್ ಹಿಡಿದು ಓಡಾಡ್ತಾರೆ, ಈ ಮೆರವಣಿಗೆಯಲ್ಲಿ ಈಶ್ವರಪ್ಪ ಮುಂದೆ ನಿಂತಿದ್ದಾರೆ ಎಂದರೆ ಇದು ನಾಗರೀಕ ಸರ್ಕಾರವೇ? ಇವತ್ತು ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ, ಆಸ್ತಿ ಪಾಸ್ತಿ ನಷ್ಟವಾಗಿದ್ದರೆ ಅದಕ್ಕೆ ಸಚಿವ ಈಶ್ವರಪ್ಪ ಅವರೇ ಹೊಣೆ ಎಂದರು.

ಸಾಕ್ಷ್ಯಗಳಿದ್ದರೆ ಪಿಎಫ್ ಐ ನಿಷೇಧಿಸಲಿ

ರಾಜ್ಯದಲ್ಲಿ ಈಶ್ವರಪ್ಪ ಅವರದೇ ಪಕ್ಷದ ಸರ್ಕಾರ ಇದೆ. ಪಿ.ಎಫ್.ಐ ಮತ್ತು ಎಸ್.ಡಿ.ಪಿ.ಐ ವಿರುದ್ಧ ಸಾಕ್ಷಗಳು ಇದ್ದರೆ ಕೂಡಲೇ ಆ ಸಂಘಟನೆಗಳನ್ನು ನಿಷೇಧ ಮಾಡಲು. ನಿಷೇಧ ಮಾಡಬೇಡಿ ಎಂದು ಅವರಿಗೆ ಅಡ್ಡ ಬರುತ್ತಿರುವವರಾದರೂ ಯಾರು?

ನ್ಯಾಯಾಂಗ ತನಿಖೆಗೆ ಆಗ್ರಹ

ಹರ್ಷ ಕೊಲೆ ಪ್ರಕರಣವನ್ನು ಎನ್.ಐ.ಎ ಇಂದಲೋ ಅಥವಾ ಬೇರೆ ಯಾವ ತನಿಖಾ ಸಂಸ್ಥೆಯ ಮೂಲಕವಾದರೂ ತನಿಖೆ ನಡೆಸಲಿ. ನನ್ನ ತಕರಾರು ಇಲ್ಲ. ನಿನ್ನೆಯ ಶವ ಯಾತ್ರೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿದೆ, ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ, ಸಾಕಷ್ಟು ಜನರ ಮೇಲೆ ಹಲ್ಲೆ, ಕಲ್ಲು ತೂರಾಟ ನಡೆದಿದೆ. ಈ ಎಲ್ಲಾ ಕಾರಣಗಳಿಗಾಗಿ ಒಟ್ಟು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಈಶ್ವರಪ್ಪ ಹೇಳಿಕೆ ಖಂಡಿಸಿದ ಜೆಪಿ ನಡ್ಡಾ

ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ರಾಷ್ಟ್ರೀಯ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಷ್ಟ್ರ ಧ್ವಜಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯುತವಾದುದ್ದು ಎಂದು ಹೇಳಿದ್ದಾರೆ. ಈಶ್ವರಪ್ಪ ಅವರು ದೇಶ ಮತ್ತು ಸರ್ಕಾರಕ್ಕಿಂತ ದೊಡ್ಡವರಲ್ಲ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಜೊತೆಗೆ ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದೂ ಆಗ್ರಹಿಸಿದರು.

ಕಾನೂನಿಗೆ ಅಗೌರವ

ಈಶ್ವರಪ್ಪ ಮೊದಲು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿ ದೇಶದ್ರೋಹ ಎಸಗಿದ್ದರು, ಈಗ ತಮ್ಮ ಸರ್ಕಾರವೇ ವಿಧಿಸಿದ್ದ 144 ಸೆಕ್ಷನ್ ಮೀರಿ ಕಾನೂನಿಗೆ ಅಗೌರವ ತೋರಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Spread the love

Related Articles

Leave a Reply

Your email address will not be published. Required fields are marked *

Back to top button