India Vs England 4th Test: ಭಾರತಕ್ಕೆ 157 ರನ್ಗಳ ಜಯ; 2-1 ಸರಣಿ ಮುನ್ನಡೆ

ಓವಲ್ : ಭಾರತದ ವೇಗ ಮತ್ತು ಸ್ಪಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ ನಲ್ಲಿ 210ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ವಿರಾಟ್ ಕೊಹ್ಲಿ ಪಡೆ ನಾಲ್ಕನೇ ಟೆಸ್ಟ್ ನಲ್ಲಿ 157ರನ್ ಗಳ ಜಯ ಗಳಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಇಂಗ್ಲೆಂಡ್ ಗೆ ಜಯ ಗಳಿಸಲು 386 ರನ್ ಗಳಿಸಬೇಕಿತ್ತು. ಒಂದು ಹಂತದಲ್ಲಿ ಇಂಗ್ಲೆಂಡ್ 100ರನ್ ಗಳಿಸಿ ವಿಕೆಟ್ ಕಳೆದುಕೊಳ್ಳದೆ ಸುಸ್ಥಿತಿಯಲ್ಲಿತ್ತು, ಆದರೆ ಜಾಯ್ ಬರ್ನ್ಸ್ (50) ಮತ್ತು ಹಸೀಬ್ ಹಮೀದ್ (63) ಅವರ ವಿಕೆಟ್ ನೆಲಕ್ಕರುಳುತ್ತಿದ್ದಂತೆ ಇಂಗ್ಲೆಂಡ್ ಪೆವಿಲಿಯನ್ ಪೆರೆಡ್ ನಡೆಸಿತು. ನಂತರದ 93 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡಿತು. ಜಸ್ಪ್ರೀತ್ ಬುಮ್ರಾ(2) ಉಮೇಶ್ ಯಾದವ್, (3) ಶಾರ್ದೂಲ್ ಠಾಕೂರ್ (2) ಮತ್ತು ರವೀಂದ್ರ ಜಡೇಜಾ ( 2) ವಿಕೆಟ್ ಗಳಿಸಿ ಕ್ರಿಕೆಟ್ ತಜ್ಞರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದರು.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ಆಡಿದ ರೀತಿ (191ರನ್) ನೋಡಿದರೆ ಈ ಪಂದ್ಯ ಇಂಗ್ಲೆಂಡ್ ಗೆಲ್ಲುತ್ತದೆ ಎಂಬುದು ತಜ್ಞರ ಲೆಕ್ಕಾಚಾರವಾಗಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ 466 ರನ್ ಗಳಿಸಿ 368 ರನ್ ಗಳ ಜಯದ ಗುರಿ ನೀಡಿದಾಗ ಪಂದ್ಯ ಕುತೂಹಲದ ಕ್ಣಣಗಳಿಗೆ ಸಾಕ್ಷಿಯಾಗುವ ಲಕ್ಷಣ ತೋರಿತ್ತು. ಆದರೆ ಭಾರತದ ಬೌಲರ್ ಗಳು ಅದಕ್ಕೆ ಅವಕಾಶ ಕೊಡಲಿಲ್ಲ.
ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಭಾರತ, ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಗಳಿಸಿತ್ತು. ನಾಲ್ಕನೇ ಪಂದ್ಯ ಭಾರತದ ಪಾಲಾದ ಕಾರಣ ಇಂಗ್ಲೆಂಡ್ ಗೆ ಸರಣಿ ಸಮಬಲಗೊಳಿಸಲು ಐದನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
