ಜಮೀರ್, ರೋಷನ್ಗೆ ಇ.ಡಿ ಶಾಕ್; ಮನೆ, ಕಚೇರಿ ಮೇಲೆ ದಾಳಿ

ಬೆಂಗಳೂರು: ಗುರುವಾರ ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ಗೆ ಇ.ಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅವರ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಂಬೂ ಬಜಾರ್ ರಸ್ತೆಯಲ್ಲಿರುವ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಬೆಳಗ್ಗೆ ಇಡಿ. ದಾಳಿ ನಡೆದಿದೆ.
ಎರಡು ಕಾರುಗಳಲ್ಲಿ ಬಂದ ಅಧಿಕಾರಿಗಳು ಜಮೀರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಜಮೀರ್ ಅಹ್ಮದ್ ಮನೆಯಲ್ಲೇ ಇದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಮನೆಯೊಳಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗ್ಗೆ 5.45ಕ್ಕೆ ಇ.ಡಿಅಧಿಕಾರಿಗಳು ಜಮೀರ್ ಅಹಮದ್ ಮನೆಗೆ ಲಗ್ಗೆ ಇಟ್ಟಿದ್ದಾರೆ. ಜಮೀರ್ ಅಹ್ಮದ್ ಮನೆ, ಚಾಮರಾಜಪೇಟೆಯಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಹಾಗೂ ಫ್ಲಾಟ್ ಮೇಲೆ ದಾಳಿ ನಡೆಸಿ, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಟ್ರಾವೆಲ್ಸ್ ಹೊರತುಪಡಿಸಿ ಜಮೀರ್ ಅಹಮದ್ ಅವರ ಇನ್ನಿತರ ವ್ಯವಹಾರಗಳ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಜಮೀರ್ ಅಹ್ಮದ್ ಖಾನ್ ಇತ್ತೀಚೆಗಷ್ಟೇ ಹೊಸದಾಗಿ ಮನೆಯನ್ನು ಕಟ್ಟಿಸಿದ್ದರು. ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅನಾಮಧೇಯ ಮೂಲಗಳಿಂದ ಮಾಹಿತಿ ಸಂಗ್ರಹ ಮಾಡಿತ್ತು ಎನ್ನಲಾಗಿದ್ದು, ಜಮೀರ್ ಕಳೆದ ಹಣಕಾಸು ವರ್ಷದಲ್ಲಿ ಘೋಷಿಸಿಕೊಂಡ ಆಸ್ತಿಗಿಂತ ದುಪ್ಪಟ್ಟು ಆಸ್ತಿ ಹೊಂದಿರುವ ಬಗ್ಗೆ ಐಟಿ ಮಾಹಿತಿಯನ್ನು ಕಲೆ ಹಾಕಿತ್ತು. ಮೊದಲು ಇದು ಐಟಿ ದಾಳಿ ಎಂದೇ ಭಾಸವಾಗಿತ್ತು.
ಆದರೆ ಇದು ಇ.ಡಿ ದಾಳಿಯಾಗಿದ್ದು, ಐಎಂಎ ವಂಚನೆ ಕೇಸ್ ಸಂಬಂಧ ದಾಳಿ ನಡೆದಿದೆ ಎನ್ನಲಾಗಿದೆ. ಏಕಕಾಲಕ್ಕೇ ಆರು ಕಡೆ ದಾಳಿ ನಡೆದಿದೆ. ಒಂದೆಡೆ ದಾಖಲೆ ಪರಿಶೀಲನೆ ನಡೆದಿರುವಾಗಲೇ, ಇನ್ನೊಂದೆಡೆ ಅದೀಕಾರಿಗಳು ಜಮೀರ್ ವಿಚಾರಣೆಯನ್ನೂ ನಡೆಸುತ್ತಿದ್ದಾರೆ.
ಇದೇ ವೇಳೆ, ರೋಷನ್ ಬೇಗ್ ಮನೆ ಮೇಲೂ ಇ.ಡಿ ದಾಳಿ ನಡೆದಿದೆ.
