ಓದಲು ಹೆಮ್ಮೆಯಿಂದ ಕಳಿಸಿಕೊಟ್ಟಿದ್ದ ಪಪ್ಪ ಈಗಿಲ್ಲ; ಪುನೀತ್ ಪಾರ್ಥಿವ ಶರೀರದ ಮುಂದೆ ಮಗಳು ಧೃತಿ ಕಣ್ಣೀರು

ಬೆಂಗಳೂರು: ಅಗಲಿದ ನಟ ಪುನೀತ್ ರಾಜ್ಕುಮಾರ್ ಪುತ್ರಿ ಧೃತಿ ತಂದೆಯ ಅಂತಿಮ ದರ್ಶನ ಪಡೆದರು.
ತಂದೆಯ ಪಾರ್ಥಿವ ಶರೀರ ನೋಡುತ್ತಿದ್ದಂತೆ ದುಃಖ ತಡೆಯಲಾರದೆ ಭಾವುಕರಾದ ಧೃತಿ ಕಣ್ಣೀರು ಹಾಕಿದರು. ಅಪ್ಪನ ತಲೆ ಮುಟ್ಟಿ ಮತ್ತೆ ಮತ್ತೆ ನೇವರಿಸಿ ಕೊನೆಯ ಬಾರಿಗೆಂಬಂತೆ ಕಣ್ತುಂಬಿಕೊಂಡರು. ತಾಯಿಯನ್ನು ತಬ್ಬಿಕೊಂಡು ಅತ್ತರು. ಈ ಸಂದರ್ಭದಲ್ಲಿ ಆಕೆಯ ಜೊತೆಗೆ ತಂಗಿ ಹಾಗೂ ದೊಡ್ಡ್ಪ ಶಿವರಾಜ್ಕುಮಾರ್ ಹಾಗೂ ಕುಟುಂಬದ ಇತರರು ಇದ್ದರು.
ತಂದೆ ನಿಧನರಾದ ಸುದ್ದಿ ಗೊತ್ತಾಗುತ್ತಿದ್ದಂತೆ ನ್ಯೂಯಾರ್ಕ್ನಿಂದ ಹೊರಟು ಇಂದು ಮಧ್ಯಾಹ್ನ ನವದೆಹಲಿ ತಲುಪಿದ್ದ ಧೃತಿ, ಅಲ್ಲಿಂದ 4.15ರ ಹೊತ್ತಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಅವರು ಅಲ್ಲಿಂದ ಬರುವುದು ವಿಳಂಬವಾಗದಂತೆ ಅವರನ್ನು ಪೊಲೀಸ್ ಎಸ್ಕಾರ್ಟ್ನಲ್ಲಿ ಕರೆದುಕೊಂಡು ಬರಲಾಯಿತು. ಏರ್ಪೋರ್ಟ್ನಿಂದ ನೇರವಾಗಿ ಸದಾಶಿವನಗರ ಮನೆಗೆ ಬಂದ ಧೃತಿ, ಬಳಿಕ ಅಲ್ಲಿಂದ ಕಂಠೀರವ ಸ್ಟೇಡಿಯಂಗೆ ಬಂದು ತಂದೆಯ ಅಂತಿಮ ದರ್ಶನ ಪಡೆದರು.
ಕೆಲವೇ ತಿಂಗಳುಗಳ ಹಿಂದೆ, ಸ್ಕಾಲರ್ಶಿಪ್ ಪಡೆದು ನ್ಯೂಯಾರ್ಕ್ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಗಳು ಸಿದ್ಧವಾದಾಗ ಹೆಮ್ಮೆಯಿಂದ ಪುನೀತ್ ಮಗಳನ್ನು ಕಳಿಸಿಕೊಟ್ಟಿದ್ದರು. ಅಂದು ಸಂಭ್ರಮಿಸಿದ್ದ ಧೃತಿಯ ಪ್ರೀತಿಯ ಪಪ್ಪಾ ಈಗಿಲ್ಲ.
