Breaking NewsLatestಕಲಬುರ್ಗಿಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿ

ಎಸಿ ಇಲ್ಲದೆ ಮಲಗಲು ಹೆಣಗಾಡಿದ ದಿವ್ಯಾ: ಕಿಂಗ್‌ಪಿನ್ ದಿವ್ಯಾ ಪಯಣ ಪಿನ್ ಟೂ ಪಿನ್ ಮಾಹಿತಿ

ಕಲಬುರಗಿ: ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತರಾದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ನ್ಯಾಯಾಲಯ ಹನ್ನೊಂದು ದಿನ ಸಿಐಡಿ ಕಸ್ಟಡಿಗೆ ನೀಡಿದೆ. ‌ಕಸ್ಟಡಿಗೆ ಪಡೆದ ಸಿಐಡಿ ರಾತ್ರಿ ಆಳಂದ ರಸ್ತೆಯಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದರು. ನಿತ್ಯ ಎಸಿಯಲ್ಲಿ ಹಾಯಾಗಿ ಮಲಗುತ್ತಿದ್ದ ದಿವ್ಯಾ, ಶುಕ್ರವಾರ ರಾತ್ರಿ ಫ್ಯಾನ್ ಗಾಳಿಗೆ ನಿದ್ದೆ ಬಾರದೆ ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ..

ಪ್ರಕರಣದ ಕಿಂಗ್‌ಪಿನ್ ದಿವ್ಯಾ ಹಾಗರಗಿಯನ್ನು ಗುರುವಾರ ರಾತ್ರಿ ಪುಣೆಯಿಂದ ಬಂಧಿಸಿ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಕಲಬುರಗಿ ಸಿಐಡಿ ಕಚೇರಿಗೆ ಕರೆತರಲಾಗಿದೆ. ದಿವ್ಯಾ ಹಾಗರಗಿ ಜತೆ ಮೇಲ್ವಿಚಾರಕಿ ಅರ್ಚನಾ, ಸುನೀತಾ ಹಾಗೂ ಇವರಿಗೆ ಆಶ್ರಯ ನೀಡಿದ್ದ ಸೊಲ್ಲಾಪುರ ಮೂಲದ ಉದ್ಯಮಿ ಸುರೇಶ ಕಾಂಟೇಗಾಂವ, ಕಾಳಿದಾಸ, ಚಾಲಕ ಸದ್ದಾಂನನ್ನು ಬಂಧಿಸಿ ಕರೆತರಲಾಗಿತ್ತು. ಬಳಿಕ ಒಂದಿಷ್ಟು ಪ್ರಾಥಮಿಕ ಪ್ರೊಸೀಜರ್ ಮುಗಿಸಿ, ಜಿಲ್ಲಾಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದ ಸಿಐಡಿ, ಸಾಯಂಕಾಲದ ಹೊತ್ತಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದೇ ವೇಳೆ 14 ದಿನ ಕಸ್ಟಡಿಗೆ ಕೊಡುವಂತೆ ನ್ಯಾಯಾಧೀಶರ ಮುಂದೆ ಸಿಐಡಿ ಮನವಿ ಸಲ್ಲಿಸಿತ್ತು. ನ್ಯಾಯಾಧೀಶರು ಎಲ್ಲಾ ಆರು ಆರೋಪಿಗಳನ್ನು 11 ದಿನ ಸಿಐಡಿ ಕಸ್ಟಡಿಗೆ ನೀಡಿದೆ.

ದಿವ್ಯಾ ಮೇಡಂ ರಾತ್ರಿ ಜಾಗರಣೆ

ಅಳಂದ ರಸ್ತೆಯಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ದಿವ್ಯಾಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ ಮಧ್ಯಾಹ್ನ ಊಟ ನಿರಾಕರಿಸಿ ಉಪವಾಸವಿದ್ದ ದಿವ್ಯಾ ರಾತ್ರಿ ಅಲ್ಪ ಆಹಾರ ಸೇವನೆ ಮಾಡಿದ್ದಳು. ನಿತ್ಯ ಎಸಿಯಲ್ಲಿ ಹಾಯಾಗಿ ಮಲಗುತ್ತಿದ್ದ ದಿವ್ಯಾ, ಸಾಂತ್ವನ ಕೇಂದ್ರದಲ್ಲಿ ಫ್ಯಾನ್ ಗಾಳಿಯಲ್ಲಿ ನಿದ್ದೆಬಾರದೆ ರಾತ್ರಿಯಿಡಿ ಜಾಗರಣೆ ಮಾಡಿದ್ದಾಳೆ. ಇಂದು ಮತ್ತೆ ಸಿಐಡಿ ತಂಡ ವಶಕ್ಕೆ ಪಡೆದು ಡ್ರಿಲ್ ನಡೆಸಲಿದೆ. ದಿವ್ಯಾ ಮತ್ತು ಗ್ಯಾಂಗ್ ಮಾಡಿದ ಅಕ್ರಮದ ಬಗ್ಗೆ ಕಲೆ ಹಾಕಲಿದೆ.

ಯಾರೋ ನನ್ನ ಪೊಟೋ ತೆಗೆಯುತ್ತಿದ್ದಾರೆ

ಬಂಧಿತ ದಿವ್ಯಾ ಶುಕ್ರವಾರ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಿಐಡಿ ಕಚೇರಿ ಪ್ರವೇಶ ಮಾಡಿದಳು. ನಂತರ ಮುಖಕ್ಕೆ ಕಟ್ಟಿದ ಬಟ್ಟೆ ತೆಗೆದು ಕೋಣೆಯೊಂದರಲ್ಲಿ ಕುಳಿತುಕೊಂಡಿದ್ದಳು. ಈ ವೇಳೆ ಯಾರೋ ನನ್ನ ಫೋಟೋ ತೆಗೆಯುತ್ತಿದ್ದಾರೆ ಅಂತ ದಿವ್ಯಾ ಡ್ರಾಮಾ ಮಾಡಿದ್ದಾಳೆ. ಸಿಐಡಿ ಸಿಬ್ಬಂದಿ ಹೊರಬಂದು ನೋಡಿದ್ರೆ ಅಂತದ್ದು ಏನು ನಡಿದಿರಲಿಲ್ಲ, ಇದು ಕೇವಲ ಆಕೆಯ ಡ್ರಾಮಾ ಅನ್ನೋದು ಗೊತ್ತಾಗಿ ಸಿಐಡಿ ಸುಮ್ಮನಾದರು.

ಮಕ್ಕಳ ಸಮೇತ ಕುಟುಂಬಸ್ಥರು ದೌಡು:

ದಿವ್ಯಾ, ಅರ್ಚನಾ ಹಾಗೂ ಸುನೀತಾಳನ್ನು ಬಂಧಿಸಿ ಕರೆತಂದಿರುವ ಮಾಹಿತಿ ಪಡೆದ ಪೋಷಕರು ಪುಟ್ಟ ಮಕ್ಕಳ ಸಮೇತ ಭೇಟಿಯಾಗಲು ಸಿಐಡಿ ಕಚೇರಿಗೆ ದೌಡಾಯಿಸಿದರು. ಆದರೆ ಅಧಿಕಾರಿಗಳು ಇವರನ್ನು ಭೇಟಿಯಾಗಲು ಬಿಡಲಿಲ್ಲ. ಸುಮಾರು ಹೊತ್ತು ನಿಂತಲ್ಲೆ ನಿಂತಿದ್ದರು. ಕೊನೆಗೆ ದೂರದಿಂದಲೇ ನೋಡಿ ವಾಪಸ್ ತೆರಳಿದರು.

ವಿದ್ಯಾರ್ಥಿಗಳ ಶಾಪ: ಫಲಿಸದ ದೈವಶಕ್ತಿ ವರ

ಮಾಡೋದೆಲ್ಲಾ ಅನಾಚಾರವಾದ್ರೂ ದಿವ್ಯಾ ಪಕ್ಕಾ ದೈವ ಭಕ್ತೆ. ತಲೆಮರೆಸಿಕೊಂಡ 18 ದಿನ ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಮಾಡಿದ್ದಾಳೆ. ಮಹಾರಾಷ್ಟ್ರ, ಗುಜರಾತ್‌ನ ಹಲವು ದೇವಸ್ಥಾನಗಳಿಗೆ ಸುತ್ತಾಡಿ ವಿಶೇಶ ಪೂಜೆ ಸಲ್ಲಿಸಿದ್ದಾಳೆ. ಎರಡೇರಡು ದಿನ ದೇವಸ್ಥಾನದಲ್ಲಿಯೇ ಕಳೆದಿದ್ದಾಳೆ. ಹೇಗಾದರೂ ಕಾಪಾಡಪ್ಪ ಅಂತ ದೇವರ ಮುಂದೆ ಪ್ರಾರ್ಥನೆ ಮಾಡಿದ್ದಾಳೆ. ಆದ್ರೆ ಅಕ್ರಮದಿಂದ ಹುದ್ದೆ ವಂಚಿತರಾದ ವಿದ್ಯಾರ್ಥಿಗಳ ಶಾಪದ ಮುಂದೆ ದೈವ ಶಕ್ತಿಯ ಪೂಜೆ ಫಲಿಸಿಲ್ಲ, ಕಡೆಗೂ ದಿವ್ಯಾ ಅರೆಸ್ಟ್ ಆಗಿದ್ದಾಳೆ.

ಹದಿನೆಂಟು ದಿನದ ಪಯಣ:

ಪಿಎಸ್ಐ ಪರೀಕ್ಷೆ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಏ.10 ರಂದು ಮಧ್ಯಾಹ್ನ ಮನೆಯಿಂದ ಪರಾರಿಯಾದ ದಿವ್ಯಾ ಅಫಜಲಪುರ ಮಾರ್ಗವಾಗಿ ಮಹಾರಾಷ್ಟ್ರದ ಸೋಲಾಪುರಕ್ಕೆ ತಲುಪಿದ್ದಳು. ಅಫಜಲಪುರ ಬಳಿ ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿದ್ದಳು. ಆ ನಂಬರ್ ಇದುವರೆಗೂ ಆನ್ ಆಗಿಲ್ಲ. ಉದ್ಯಮಿ ಸುರೇಶ ಕಾಟೆಂಗಾಂವ ಸಹಾಯ ಪಡೆದು ತೋಟದ ಮನೆಯಲ್ಲಿ ಎರಡು ದಿನ ತಂಗಿದ್ದಳು. ಇಲ್ಲಿ ಸಿದ್ರಾಮೇಶ್ವರ ದೇವರ ದರ್ಶನ ಪಡೆದಿದ್ದಳು. ನಂತರ ಪೂನಾದಲ್ಲಿ ಐದು ದಿನ ಉಳಿದುಕೊಂಡಿದ್ದಳು. ಬಳಿಕ ಗುಜರಾತ್‌ ತೆರಳಿ ಮೂರು ದಿನ ಅಲ್ಲಿಯೇ ಕಳೆದಿದ್ದಾರೆ. ಗುಜರಾತ್‌ನಲ್ಲಿ ತಂಗಿದ್ದಾಗ ಅಲ್ಲಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿದ್ದಾರೆ. ಏ. 22ರಂದು ಮರಳಿ ಪೂನಾ ಆಗಮಿಸಿ ಬಂಧನವಾಗುವರೆಗೆ ಪೂನಾ ಹೊರವಲಯದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು. ದಿವ್ಯಾ ಹಾಗರಗಿ ಪರಾರಿಯಾಗುವ ಮುನ್ನ ಮೂರು ಲಕ್ಷ ರೂಪಾಯಿ ನಗದು ಹಣ ತೆಗೆದುಕೊಂಡು ಹೋಗಿದ್ದಳು. ಹೀಗಾಗಿ ಯಾವುದೇ ಎಟಿಎಂ ಅಥವಾ ಬ್ಯಾಂಕಿನಿಂದ ಹಣ ಡ್ರಾ ಮಾಡಿರಲಿಲ್ಲ. ಬ್ಯಾಂಕ್ ಖಾತೆಗಳ ಮೇಲೆ ನಿಗಾ ವಹಿಸಿದ ಸಿಐಡಿಗೆ ಇದು ನಿರಾಶೆ ಮೂಡಿಸಿತ್ತು..

ಕೋಟಿ ಕೋಟಿ ಆಸ್ತಿ ಇದ್ರೂ ದುರಾಸೆ

ಬಂಧಿತ ಆರೋಪಿ ದಿವ್ಯಾ ಹಾಗರಗಿ ಕುಟುಂಬ ಸಾಕಷ್ಟು ಹಣವಂತರಾಗಿದ್ದಾರೆ. ಕೋಟಿ ಕೋಟಿ ಮೌಲ್ಯದ ಆಸ್ತಿ ಇದೆ. ಹಲವು ಶಾಲಾ ಕಾಲೇಜುಗಳು ಸೇರಿ ಹತ್ತಾರು ಬಿಜಿನೆಸ್ ಗಳು ಇವೆ. ಕಲಬುರ್ಗಿ ಜಿಲ್ಲೆ ಸುತ್ತಮುತ್ತ ಕೊಟ್ಟಂತರ ಮೌಲ್ಯದ ಆಸ್ತಿ ಇದೆ. ರಾಜಕೀಯವಾಗಿಯೂ ಉತ್ತಮ ಹೆಸರಿತ್ತು. ಇಷ್ಟೆಲ್ಲಾ ಐಷಾರಾಮಿ ಜೀವನ ಇದ್ದರೂ ಹಣದ ದುರಾಸೆಗೆ ಬಿದ್ದ ದಿವ್ಯಾ, ಪರೀಕ್ಷೆಯಲ್ಲಿ ಅಕ್ರಮವೆಸಗುವ ಮೂಲಕ ಹೆಚ್ಚಿನ ಹಣಗಳಿಸುವ ದುರಾಸೆಗೆ ಬಿದ್ದಿದ್ದೆ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ‌. ಈಗ ಇರೋಬರೋ ಮಾನ ಮೂರು ಕಾಸಿಗೆ ಹರಾಜು ಆಗಿದೆ.

ಸದ್ಯ ಸಿಐಡಿ ವಶದಲ್ಲಿರುವ ದಿವ್ಯಾ & ಟೀಂಗೆ ಇಂದು ಸಿಐಡಿ ಡ್ರಿಲ್ ನಡೆಸಲಿದ್ದು, ಅಕ್ರಮ ಪ್ರಕರಣದಲ್ಲಿ ಮತ್ತೆ ಯಾರ ಕೈವಾಡವಿದೆ ಬಯಲಿಗೆಳೆದಿದ್ದಾರೆ. ಅಕ್ರಮದ ಉರುಳು ಮತ್ಯಾರ ಕೊರಳಿಗೆ ಸುತ್ತಲಿದೆ ಕಾದುನೋಡಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button