ಜನಸ್ಪಂದನ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ ಅನಾವರಣ..!

ದಾವಣಗೆರೆ: ಮುಖ್ಯಮಂತ್ರಿಗಳ ಪರಿಹಾರ ನಿಧಿ ಸರಿಯಾಗಿ ಸಿಗ್ತಿಲ್ಲ, ಬಸ್ ವ್ಯವಸ್ಥೆ ಇಲ್ಲ, ಪಹಣಿ, ಜಾತಿ ಪ್ರಮಾಣ ಪತ್ರ ಒದಗಿಸುತ್ತಿಲ್ಲ.. ಹೀಗೆ ಸಾರ್ವಜನಿಕರಿಂದ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರ ಮುಂದೆ ಜನರು ಸಮಸ್ಯೆಗಳ ಸರಮಾಲೆಯನ್ನೇ ಹೇಳಿಕೊಂಡರು.
ಜಗಳೂರು ತಾಲ್ಲೂಕಿನ ಗಡಿ ಭಾಗದ ಚಿಕ್ಕ ಮಂಗನಹೊಳೆ ಗ್ರಾಮದ ವ್ಯಕ್ತಿಯೊಬ್ಬರು ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ನ್ಯಾಯ ಬೆಲೆ ಅಂಗಡಿ ಹೊರತುಪಡಿಸಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ, ಬಸ್ ತಂಗುದಾಣ, ಗ್ರಂಥಾಲಯ, ಸಮುದಾಯ ಭವನ, ಚೆಕ್ ಡ್ಯಾಂ ರಿಪೇರಿ, ಬ್ಯಾಂಕ್ ಶಾಖೆ ಸೇರಿದಂತೆ ಅಗತ್ಯವಾದ ಸೌಲಭ್ಯಗಳನ್ನು ಗ್ರಾಮಕ್ಕೆ ಒದಗಿಸುವಂತೆ ಕೋರಿ ಸಲ್ಲಿಸಿದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಗ್ರಾಮಕ್ಕೆ ತಾವೇ ಖುದ್ದಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುವುದು ಎಂದರು.
ಕರೆಕಟ್ಟೆ ಗ್ರಾಮದ ವೃದ್ದ ವ್ಯಕ್ತಿಯೊಬ್ಬರು ಭತ್ತದ ಅಂಗಡಿ ಮಾಲೀಕನೊಬ್ಬ ಭತ್ತ ಖರೀದಿಸಿ ಹಣ ನೀಡದೇ ಮೋಸ ಮಾಡಿದ್ದು, ನ್ಯಾಯ ದೊರಕಿಸುವಂತೆ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಜೊತೆಗೆ ಚರ್ಚಿಸಿ, ನ್ಯಾಯ ದೊರಕಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಚನ್ನಗಿರಿ ತಾಲ್ಲೂಕಿನ ಸೋಮಲಾಪುರ ಗ್ರಾಮಕ್ಕೆ ಕೆಎಸ್ಆರ್ ಟಿಸಿ ಬಸ್ ಸಂಚಾರ ಕಲ್ಪಿಸುವಂತೆ ಗ್ರಾಮದ ಮುಖಂಡರೋರ್ವರು ಮಾಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಸೋಮಲಾಪುರ ಗ್ರಾಮಕ್ಕೆ ಕೆಎಸ್ಆರ್ ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆಎಸ್ಆರ್ಟಿಸಿ ದಾವಣಗೆರೆ ವಿಭಾಗದ ಮುಖ್ಯಸ್ಥರಿಗೆ ಸೂಚಿಸಿದರು.
ಶಿರಮಗೊಂಡನಹಳ್ಳಿ ಗ್ರಾಮದ ರವೀಂದ್ರನಾಥ್ ಬಡಾವಣೆಯ ನಿವಾಸಿಯೋರ್ವರು ಮನವಿ ಮಾಡಿ ಬಡಾವಣೆಯಲ್ಲಿ ರಸ್ತೆಗಳು, ಪಾರ್ಕುಗಳು ಹಾಳಾಗಿದ್ದು ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದರು. ಬಡಾವಣೆಯ ಸಮಸ್ಯೆಗಳನ್ನು ಸರ್ಕಾರ ಬಿಡುಗಡೆ ಮಾಡುವ ಅನುದಾನಕ್ಕೆ ಅನುಗುಣವಾಗಿ ಹಂತ ಹಂತವಾಗಿ ಅನುದಾನ ಒದಗಿಸಿ ಅಭಿವೃದ್ಧಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸುವ ಸಲುವಾಗಿ ಜನಸ್ಪಂದನಾ ಸಭೆ ನಡೆಸಲಾಗುತ್ತಿದ್ದು, ಅಧಿಕಾರಿಗಳು ವಿಳಂಬಕ್ಕೆ ಅವಕಾಶ ನೀಡದೆ ಸಾರ್ವಜನಿಕ ಮನವಿಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
