ಈಡೇರಿತು ದಶಕಗಳ ಜನರ ಬೇಡಿಕೆ: ನೀರು ಹರಿಸಲು ಕಾರಣವಾದ ಶ್ರೀಗಳಿಗೆ ಧನ್ಯವಾದ

ದಾವಣಗೆರೆ: ಭರಮಸಾಗರ, ಜಗಳೂರು, ಮಾಯಕೊಂಡ ಜನರಿಗೆ ನೀರುಣಿಸುವ ನೀರಾವರಿ ಯೋಜನೆ ಯಶಸ್ವಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಜಗಳೂರು ವಿಧಾನಸಭಾ ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆಯ ನೀರು ಸಿರಿಗೆರೆಯ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ, ಕೃಪಾ ಆಶೀರ್ವಾದದೊಂದಿಗೆ ಮಹತ್ವಾಕಾಂಕ್ಷೆ ಯೋಜನೆಯು ಸಕಾರಗೊಂಡಿದೆ
ಪ್ರಾಥಮಿಕ ಹಂತವಾಗಿ ಚಟ್ನಿಹಳ್ಳಿ ಗುಡ್ಡಕ್ಕೆ ನೀರು ಬರುತ್ತಿದ್ದು, ಇಲ್ಲಿಂದ ತುಪ್ಪದಹಳ್ಳಿ ಕೆರೆಗೆ ನೀರು ಹರಿಯುತ್ತಿರುವುದನ್ನು ಜಗಳೂರು ಶಾಸಕ ಎಸ್ ವಿ.ರಾಮಚಂದ್ರಪ್ಪ ಹಾಗೂ ಜನರು ವೀಕ್ಷಣೆ ಮಾಡಿ ಖುಷಿಪಟ್ಟರು.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು, ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ ಹಾಗೂ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ಜನತೆ ಏತ ನೀರಾವರಿ ಯೋಜನೆಯಡಿ ಹರಿದುಬಂದ ನೀರನ್ನು ನೋಡಿ ದಶಕದಿಂದ ಕಾಣುತ್ತಿದ್ದ ಕನಸು ನನಸಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣರಾದ ಸಿರಿಗೆರೆ ಮಠದ ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮಿಗಳಿಗೆ ಸಾವಿರ ಸಾವಿರ ಪ್ರಣಾಮಗಳನ್ನು ಅರ್ಪಿಸಿದ್ದಾರೆ.
ಯಾವುದೇ ಒಂದು ನೀರಾವರಿ ಯೋಜನೆ ಪ್ರಾರಂಭವಾಗಿ ದಶಕಗಳೇ ಕಳೆದರೂ ಮುಗಿಯದ ಉದಾಹರಣೆಗಳು ಹೆಚ್ಚು. ಕೇವಲ ನಾಲ್ಕು ವರ್ಷದ ಹಿಂದೆ ಏತ ನೀರಾವರಿ ಯೋಜನೆಯ ಬಗ್ಗೆ ಪರಮಪೂಜ್ಯರು ಮಾತನಾಡಿದಾಗ ಇದು ಸಾಧ್ಯವೇ ಎಂದು ಕೇಳಿದವರೇ ಹೆಚ್ಚು. ಸಾವಿರಾರು ಕೋಟಿ ವೆಚ್ಚದಲ್ಲಿ ಡ್ಯಾಂಗಳನ್ನು ಕಟ್ಟಿ, ಚಾನಲ್ ಮೂಲಕ ನೀರು ಹರಿಸಿದರೂ ಸಹ ಕೊನೆಯ ಭಾಗದ ರೈತರಿಗೆ ನೀರು ಸಿಗುವುದೇ ದುಸ್ತರ. ಸುಮಾರು 60 ಕಿಲೋಮೀಟರ್ ದೂರದಲ್ಲಿನ ಏತ ನೀರಾವರಿ ಯೋಜನೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿತ್ತು. ಆದರೆ ಈಗ ಇದು ಸಾಧ್ಯವಾಗಿದೆ.
ಈ ಯೋಜನೆಯ ಮೂಲಕ ಮುಂದಿನ ದಿನಗಳಲ್ಲಿ ಕೃಷಿ ಕೂಡ ಅತ್ಯಂತ ಹೆಚ್ಚು ಆದಾಯ ತರುವ ಉದ್ಯಮವಾಗುವ ಸಾಧ್ಯತೆಗಳು ಹೆಚ್ಚಿದ್ದು, ದಾವಣಗೆರೆ ಜಿಲ್ಲೆ ಬರದಿಂದ ವಿಮುಕ್ತವಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮೃದ್ಧ ಜಿಲ್ಲೆಯಾಗುವ ಮುನ್ನುಡಿಗೆ ಕಾರಣೀಭೂತರಾದ ಶ್ರೀಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
