ಬಾಲ ಬಿಚ್ಚೀರಾ ಹುಷಾರ್: ದಾವಣಗೆರೆ ಎಸ್ ಪಿ ಖಡಕ್ ಎಚ್ಚರಿಕೆ!

ದಾವಣಗೆರೆ: ಜಿಲ್ಲೆಯಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೋಳಿ ಹಬ್ಬ ಮತ್ತು ಷಬ್-ಎ-ಬರಾತ್ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೋಳಿ ಹಬ್ಬ ಮತ್ತು ಷಬ್-ಎ-ಬರಾತ್ ಹಬ್ಬದ ಪ್ರಯುಕ್ತ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೋಳಿ ಹಬ್ಬ ಹಾಗೂ ಷಬ್-ಎ-ಬರಾತ್ ಹಬ್ಬಗಳು ಒಟ್ಟಿಗೆ ಬಂದಿರುವುದರಿಂದ ಜಿಲ್ಲೆ ಹಾಗೂ ನಗರದಲ್ಲಿ ಸಾರ್ವಜನಿಕರು ಪ್ರಾರ್ಥನೆ ಸಲ್ಲಿಸುವುದು ಮತ್ತು ಕಾಮದಹನ ಮಾಡುವುದರಿಂದ ಕೆಲವು ಕಡೆಗೆ ಸಣ್ಣಪುಟ್ಟ ಅವಗಡಗಳು ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಈ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದ್ದು, ನಗರದ ಮೂರು ಕಡೆ ಖಬರಸ್ಥಾನಗಳಲ್ಲಿ ಮುಸ್ಲಿಂ ಸಮುದಾಯ ದವರಿಂದ ರಾತ್ರಿಯ ನಮಾಜ್ ನಂತರ ಪ್ರಾರ್ಥನೆ ಸಲ್ಲಿಸುವ ಕಾರ್ಯ ನಡೆಯಲಿದೆ ಮತ್ತು ಕಾಮದಹನದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ರಾತ್ರಿಯ ವೇಳೆಯಲ್ಲಿ ರಸ್ತೆಗಳಲ್ಲಿ ಓಡಾಡುವುದು, ಸುತ್ತಾಡುವುದು ಮಾಡಬಾರದು. ಹೆಚ್ಚಾಗಿ ಹಿರಿಯರಿಗಿಂತ ಯುವಕರು ಕಾನೂನು ವ್ಯಾಪ್ತಿ ಮೀರಿ ಸಂಭ್ರಮಿಸುವ ಘಟನೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಹಾಗಾಗಿ ಎರಡು ಸಮುದಾಯದ ಮುಖಂಡರು ಯುವಪೀಳಿಗೆಗೆ ಬುದ್ಧಿವಾದ ಹೇಳಿ ಮಾರ್ಗದರ್ಶನ ನೀಡಬೇಕು ಎಂದರು.
ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಲ್ಲಿ ಪೊಲೀಸರ ಗಮನಕ್ಕೆ ತರದೇ ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದು. ದ್ವಿಚಕ್ರವಾಹನದ ಸೈಲೆಂಸರ್ ಮೂಲಕ ಹೆಚ್ಚಿನ ಶಬ್ದ ಮಾಲಿನ್ಯ ಉಂಟುಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಬಾರದು, ಅಂತಹ ಘಟನೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಜಾತ್ರೆಯ ಪ್ರಯುಕ್ತ ನಗರದೆಲ್ಲೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಪಾಲಿಕೆಯವರ ಅನುಮತಿಯಿಲ್ಲದೆ ಯಾವುದೇ ಪೋಸ್ಟರ್ ಮತ್ತು ಬ್ಯಾನರ್ ಗಳನ್ನು ಹಾಕಬಾರದು. ಹೋಳಿಯ ಸಂದರ್ಭದಲ್ಲಿ ಮಹಿಳೆಯರ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳುವ ಮೂಲಕ ಹೋಳಿಯನ್ನು ಸಂತೋಷವಾಗಿ ಆಚರಿಸಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆಯ ಮೇಯರ್ ಜಯಮ್ಮ ಗೋಪಿನಾಯ್ಕ್ ಮಾತನಾಡಿ, ಹೋಳಿ ಹಬ್ಬದ ಸಮಯದಲ್ಲಿ ಕೆಲವು ಕಿಡಿಗೇಡಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರೋಡಿನಲ್ಲಿ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಣ್ಣ ಎರಚುವುದು ಹಾಗೂ ನೀರು ಹಾಕುವುದು, ಬಲವಂತವಾಗಿ ಮೊಟ್ಟೆ ಹೊಡೆಯುವುದು ಅಲ್ಲಲ್ಲಿ ಕಂಡುಬರುತ್ತದೆ ಪೊಲೀಸರು ಇದರ ಬಗ್ಗೆ ಗಮನ ಹರಿಸಬೇಕು ಎಂದರು. ಮಹಾನಗರ ಪಾಲಿಕೆಯಿಂದ ಹೋಳಿ ಹಬ್ಬ ಹಾಗೂ ಷಬ್ ಎ ಬರಾತ್ ಹಬ್ಬ ಹಾಗೂ ದುರ್ಗಾದೇವಿ ಜಾತ್ರೆಯ ಪ್ರಯುಕ್ತ ನಗರದಲ್ಲಿ ನೀರು, ಸ್ವಚ್ಛತೆ, ವಿದ್ಯುತ್ ಹಾಗೂ ಎಲ್ಲ ರೀತಿಯ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ ಬಸರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ದೇಶವು ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಹಾಗಾಗಿ ಮುಂಬರುವ ಷಬ್-ಎ-ಬರಾತ್ ಮತ್ತು ಹೋಳಿ ಹಬ್ಬದ ಪ್ರಯುಕ್ತ ಜಿಲ್ಲೆಯ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಸಭೆಯನ್ನು ಆಯೋಜಿಸಲಾಗಿದೆ. ಷಬ್-ಎ-ಬರತ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಸಂಪ್ರದಾಯದಂತೆ ನಮಾಜ್ ನಂತರ ರಾತ್ರಿ ಜಾಗರಣೆ ಮತ್ತು ಖಬರಸ್ಥಾನಕ್ಕೆ ಭೇಟಿ ನೀಡುತ್ತಾರೆ. ಹೋಳಿ ಹಬ್ಬದ ಪ್ರಯುಕ್ತ ಹಿಂದೂ ಸಮುದಾಯದವರು ತಾವು ವಾಸಿಸುವ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಕಾಮದಹನ ಮತ್ತು ಮರುದಿನ ಬಣ್ಣದ ಆಟವನ್ನು ಆಚರಿಸುತ್ತಾರೆ. ಆದ್ದರಿಂದ ಎರಡು ಸಮುದಾಯದ ಮುಖಂಡರು ಈಗೀನ ಯುವಕರಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಮಾರ್ಗದರ್ಶನ ಮತ್ತು ಬುದ್ಧಿವಾದಗಳನ್ನು ಹೇಳಬೇಕು ಎಂದರು.
ಮುಸ್ಲಿಂ ಸಮಾಜದ ಮುಖಂಡ ಸಾಧಿಕ್ ಪೈಲ್ವಾನ್ ಮಾತನಾಡಿ, ಮುಸ್ಲಿಮರು ಸಂಪ್ರದಾಯದಂತೆ ನಮಾಜ್ ನಂತರ ಹಿರಿಯರಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ. ಇದು ಕೇವಲ 10 ರಿಂದ 15 ನಿಮಿಷದಲ್ಲಿ ಮುಗಿದು ಹೋಗುತ್ತದೆ. ಈ ಹಿಂದೆ ಸೂಕ್ಷ್ಮ ಪ್ರದೇಶದಲ್ಲಿರುವ ಜನರಿಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಿಳಿ ಹೇಳಿದ್ದೇವೆ. ಮುಂದೆಯೂ ಕೂಡ ಇದೇ ರೀತಿ ಸಹಕರಿಸಲಿದ್ದೇವೆ. ಹಿಂದೂ – ಮುಸ್ಲಿಮರು ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ, ಒಂದೇ ತಾಯಿಯ ಮಕ್ಕಳಂತೆ ಶಾಂತಿ ಸೌಹಾರ್ದತೆಯಿಂದ ಬಾಳಿ ಬದುಕಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಆಚರಿಸುವ ಹಬ್ಬವು ಇತರ ಜಿಲ್ಲೆಗೂ ಮಾದರಿಯಾಗುವಂತೆ ಆಚರಿಸೋಣ ಎಂದರು
