Breaking NewsLatestರಾಷ್ಟ್ರೀಯಸುದ್ದಿ
ಡಿ. 7ರಿಂದ ಸಂಸತ್ ಚಳಿಗಾಲದ ಅಧಿವೇಶನ

ನವದೆಹಲಿ: ಸಂಸತ್ನ ಚಳಿಗಾಲದ ಅಧಿವೇಶನ ಡಿಸೆಂಬರ್ 7ರಿಂದ 29ರ ವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಒಟ್ಟು 17 ದಿನಗಳ ಕಾಲ ಕಲಾಪ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. 2022ರ ಚಳಿಗಾಲದ ಅಧಿವೇಶನ ಡಿಸೆಂಬರ್ 7ರಿಂದ 29ರ ವರೆಗೆ ನಡೆಯಲಿದ್ದು, ಈ 23 ದಿನಗಳ ಅವಧಿಯಲ್ಲಿ 17 ಕಲಾಪಗಳು ನಡೆಯಲಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರ ಮತ್ತು ಇತರ ವಿಷಯಗಳ ಕುರಿತಾದ ಚರ್ಚೆಗಳನ್ನು ಅಮೃತ ಕಾಲವು ಎದುರು ನೋಡುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಜಗದೀಪ್ ಧನ್ಕರ್ ಅವರು ಉಪ ರಾಷ್ಟ್ರಪತಿಯಾದ ಬಳಿಕ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನ ಇದಾಗಿದೆ. ಅವರು ಮೊದಲ ಬಾರಿಗೆ ರಾಜ್ಯಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಅಧಿವೇಶನದ ಮೊದಲ ದಿನ ಸಂತಾಪ ಸೂಚಕ ಸಭೆ ನಡೆಯಲಿದ್ದು, ದಿನದ ಮಟ್ಟಿಗೆ ಕಲಾಪ ಮುಂದೂಡಿಕೆಯಾಗಲಿದೆ. ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಕೆಲವು ಸಂಸದರು ಇತ್ತೀಚೆಗೆ ಅಸುನೀಗಿದ್ದಾರೆ.
