ಭಟ್ಕಳ: ಮಗಳ ಸಾವಿನ ಸುದ್ದಿ ಕೇಳಿ ತಂದೆಯೂ ಹೃದಯಾಘಾತದಿಂದ ಸಾವು
ಕಾರವಾರ : ಅನಾರೋಗ್ಯದಿಂದ ಮಗಳು ಸತ್ತ ಸುದ್ದಿ ತಿಳಿದು ತಂದೆಯೂ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾರುಕೇರಿಯಲ್ಲಿ ನಡೆದಿದೆ.
ಭಟ್ಕಳದ ಮಾರುಕೇರಿ ಹೆಜ್ಜಿಲು ಗ್ರಾಮದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ ಕಾವ್ಯಾ ರಾಮ ಗೊಂಡ (15) ಇಂದು ಉಸಿರಾಟದ ತೊಂದರೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಳು.
ಈ ವಿಷಯ ಮನೆಯಲ್ಲಿ ಇದ್ದ ಈಕೆಯ ತಂದೆ ರಾಮ ಸುಕ್ರಾ ಗೊಂಡ (46) ಎಂಬುವವರಿಗೆ ತಿಳಿಸಲಾಗಿದೆ. ಈ ವೇಳೆ ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲೇ ಹೃದಯಾಘಾತವಾಗಿ ಅವರು ಮೃತಪಟ್ಟಿದ್ದಾರೆ.
ವಿದ್ಯಾರ್ಥಿನಿಯು ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮಾ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ವರ್ಷದ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಳು. ಈಕೆ ಇದಕ್ಕಿಂದ್ದಂತೆ ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ನರಳುತ್ತಿದ್ದು, ಸೋಮವಾರ ಬೆಳಿಗ್ಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಒಂದೇ ದಿನದಲ್ಲಿ ಈ ಕುಟುಂಬ ಎರಡು ಸಾವು ಕಂಡಂತಾಗಿದೆ.
