ನಾಳೆಯಿಂದ ದೇಗುಲ ದರ್ಶನಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ : ಬಾದಾಮಿ ಬನಶಂಕರಿ ದೇಗುಲ ತೆರೆಯಲು ಸಿದ್ಧತೆ

ಬಾಗಲಕೋಟೆ: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಬಾಗಿಲು ಬಂದ್ ಆಗಿದ್ದ ದೇಗುಲ ದರ್ಶನದ ಭಾಗ್ಯ ನಾಳೆಯಿಂದ ಭಕ್ತರಿಗೆ ಸಿಗಲಿದೆ. ನಾಡಿನ ಶಕ್ತಿ ಪೀಠಗಳೊಲ್ಲೊಂದಾಗಿರುವ ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ನಾಳೆಯಿಂದ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು, ರಾಜ್ಯ ಸರ್ಕಾರದ ಅನ್ ಲಾಕ್ ಮಾರ್ಗಸೂಚಿ ಪ್ರಕಾರ ಭಕ್ತರಿಗೆ ದರ್ಶನ ಸಿಗಲಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಬನಶಂಕರಿ ದೇಗುಲ ಸೇರಿದಂತೆ ನಾಡಿನ ದೇವಸ್ಥಾನ ಓಪನ್ ಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅದ್ರ ಬೆನ್ನಲ್ಲೇ ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ, ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದ ಬನಶಂಕರಿ ದೇವಿ ದೇವಸ್ಥಾನ ಸೋಮವಾರದಿಂದ ಓಪನ್ ಆಗಲಿದೆ. ಭಕ್ತರಿಗೆ ಎಂದಿನಂತೆ ದೇವಿ ದರ್ಶನ ಭಾಗ್ಯ ಸಿಗಲಿದೆ. ಭಕ್ತರ ಪ್ರವೇಶಕ್ಕೆ ದೇವಸ್ಥಾನ ಆಡಳಿತ ಮಂಡಳಿಯವರು ಈ ಬಾರಿ ಕೆಲವು ಬದಲಾವಣೆಗಳನ್ನ ಮಾಡಿಕೊಂಡಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಇನ್ನು ದೇವಸ್ಥಾನದ ಎರಡು ಬದಿಗೆ ಒಂದೊಂದು ಸ್ಯಾನಿಟೈಸರ್ ಮಷಿನ್ ಅಳವಡಿಸಲಾಗಿದ್ದು, ದೇವಸ್ಥಾನ ಪ್ರವೇಶಿಸುವ ಮುನ್ನ ಭಕ್ತರು ಸ್ಯಾನಿಟೈಸ್ ಮಾಡಿಕೊಂಡು ಒಳ ಪ್ರವೇಸಿಸಬಹುದು. ಗರ್ಭಗುಡಿಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ಭಕ್ತರಿಗೆ ಗರ್ಭಗುಡಿ ಪ್ರವೇಶ ಇರುತ್ತೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿದೆ. ಭಕ್ತರು ಕಾಯಿ, ಊದಬತ್ತಿ ಹಚ್ಚಲು ದೇವಸ್ಥಾನ ಪ್ರವೇಶ ದ್ವಾರದ ಬಳಿ ಅವಕಾಶವಿದ್ದು, ಯಾವುದೇ ಪೂಜಾ ಸೇವೆಗಳು ಇರಲ್ಲ. ಪ್ರಸಾದ ವ್ಯವಸ್ಥೆ ನಿಷೇಧವಿದ್ದು, ಭಕ್ತರಿಗೆ ಕೇವಲ ತೀರ್ಥ ಸಿಗಲಿದೆ. ಇನ್ನು ಗುಂಪು ಗುಂಪಾಗಿ ದೇವಸ್ಥಾನ ಪ್ರವೇಶಿಸಲು ಅವಕಾಶ ಇರಲ್ಲ. ಸರ್ಕಾರಿ ಮಾರ್ಗಸೂಚಿ ಪಾಲನೆಯೊಂದಿಗೆ ದೇಗುಲ ಪ್ರವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅರ್ಚಕ ಸುರೇಶ್ ಪೂಜಾರಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೋವಿಡ್ ಲಾಕ್ ಡೌನ್ ದಿಂದಾಗಿ ಇಷ್ಟು ದಿನ ದೇವರ ದರ್ಶನ ಇಲ್ಲದೆ ಭಕ್ತರು ಹೊರಗಿನಿಂದಲೇ ಕೈಮುಗಿಯುತ್ತಿದ್ದರು.ಇದೀಗ ದೇವರ ದರ್ಶನ ಭಾಗ್ಯ ನಾಳೆಯಿಂದ ಸಿಗಲಿದೆ. ಆದರೆ ಮರೆಯದೇ ಕೋವಿಡ್ ನಿಯಮಾವಳಿ ಪಾಲಿಸಬೇಕಿದೆ.
