ಕಂದಾಯ ಗ್ರಾಮಗಳಾಗಿ ಲಂಬಾಣಿ ತಾಂಡಗಳ ಪರಿವರ್ತನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ, ಡಿಸೆಂಬರ್ 23- ರಾಜ್ಯದ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ 2 ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ಇತರ ಜಿಲ್ಲೆಗಳಲ್ಲಿಯೂ ಶೀಘ್ರ ಸರ್ವೇ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ಗುರುವಾರ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ವತಿಯಿಂದ ಸ್ಥಾಪಿಸಲಾದ 18 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಾಯಧನ ಚೆಕ್ ವಿತರಿಸಿ ಅವರು ಮಾತನಾಡಿದರು.
ಸರ್ವೇಯರುಗಳ ನೇಮಕ ಪೂರ್ಣಗೊಂಡ ಕೂಡಲೇ ತಾಂಡಾಗಳ ಸರ್ವೇ ಪ್ರಕ್ರಿಯೆ ಇತರ ಜಿಲ್ಲೆಗಳಲ್ಲಿಯೂ ಪ್ರಾರಂಭಿಸಲಾಗುವುದು. ನಿಗದಿತ ಅವಧಿಯಲ್ಲಿ ಈ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ತಾಂಡ ಅಭಿವೃದ್ಧಿ ನಿಗಮವು ಬಂಜಾರ ಸಮುದಾಯದವರ ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸುವ ಮೂಲಕ ಅವರ ಆರ್ಥಿಕ ಸ್ವಾವಲಂಬನೆಗೆ ಮಹತ್ವದ ಕ್ರಮ ಕೈಗೊಂಡಿದ್ದು, ನಿಗಮದ ಅಲ್ಪ ಅನುದಾನದಲ್ಲಿ ಉತ್ಕೃಷ್ಟ ಉಪಯೋಗ ಮಾಡಿರುವುದು ಶ್ಲಾಘನೀಯ ಎಂದರು.
ನಿಗಮದ ವತಿಯಿಂದ ಬಂಜಾರ ಸಮುದಾಯ ಇರುವ ಎಲ್ಲ ತಾಲ್ಲೂಕುಗಳಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಬೇಕು. ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಎಫ್.ಪಿ.ಓ.ಗಳಿಗೆ ಮತ್ತೆ 15 ಲಕ್ಷ ರೂ. ನೆರವು ನೀಡಿ, ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.
ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಮೂಲಕ ಯಾವುದೇ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಆದ್ದರಿಂದ ನಿಗಮವು ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡುವಂತೆ ಸೂಚಿಸಿದರು.
