ಬಿಎಸ್ ವೈರನ್ನು ಅಧಿಕಾರದಿಂದ ಇಳಿಸಿದವರೇ ಬೊಮ್ಮಾಯಿ ವಿರುದ್ಧ ಹುನ್ನಾರ: ಡಿಕೆಶಿ ಗಂಭೀರ ಆರೋಪ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಮಾದರಿಯಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿರುವ ಹುನ್ನಾರದ ಭಾಗವೇ ರಾಮನಗರದಲ್ಲಿ ಸಚಿವ ಅಶ್ವತ್ಥನಾರಾಯಣ ಅವರ ವ್ಯತಿರಿಕ್ತ ವರ್ತನೆಗೆ ಕಾರಣ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರ ಹಿಂದೆ ಆರ್.ಎಸ್.ಎಸ್ ಮತ್ತು ಬಿಜೆಪಿಯ ಕೆಲವರ ಕಾಣದ ಕೈವಾಡವಿದೆ ಎಂದು ಆರೋಪಿಸಿದರು.
ಅಶ್ವತ್ಥ ನಾರಾಯಣ ಅವರು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕಿತ್ತು. ಜಿಲ್ಲೆಗೆ ಬಂದ ಮುಖ್ಯಮಂತ್ರಿ ಅವರನ್ನು ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿಎಂರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು. ಅದು ಬಿಟ್ಟು ವೇದಿಕೆ ಮೇಲೆ ಸವಾಲು ಹಾಕುವ ರೀತಿಯಲ್ಲಿ ಮಾತನಾಡಿದರೆ ಅದಕ್ಕೆ ಯಾರೂ ಸೊಪ್ಪು ಹಾಕುವುದಿಲ್ಲ. ಸಚಿವ ಅಶ್ವತ್ಥನಾರಾಯಣ ಅವರ ವರ್ತನೆ ದುರಹಂಕಾರದ ಪರಮಾವಧಿ ಎಂದರು.
ಕಾರ್ಯಕ್ರಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರೂ ಘಟನೆಯಿಂದ ನೊಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖುದ್ದು ಸಿಎಂ ಬೊಮ್ಮಾಯಿ ಅವರೇ ಕೈ ಸನ್ನೆ ಮೂಲಕ ಆಶ್ವತ್ಥನಾರಾಯಣ ಅವರನ್ನು ವೇದಿಕೆಯಲ್ಲಿ ತಡೆಯಲು ಮುಂದಾದಾಗಲೂ ಸಿಎಂರನ್ನು ಕೇರ್ ಮಾಡಿಲ್ಲ ಅಂದರೆ ಎನರ್ಥ ಎಂದು ಪ್ರಶ್ನಿಸಿದರು.
ಈ ನಡುವೆ ರಾಮನಗರ ಘಟನೆ ಕುರಿತು ಟ್ವೀಟ್ ಮಾಡಿರುವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ನಿರಂತರ ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ವೇದಿಕೆಗಳಲ್ಲಿ ಇಲ್ಲಸಲ್ಲದ್ದನ್ನು ಮಾತನಾಡಿ ಜನರನ್ನು, ನಾಯಕರನ್ನು ಪ್ರಚೋದಿಸುತ್ತಿದ್ದಾರೆ. ಬಿಜೆಪಿ ತಾನು ಮಾಡಿದ್ದೆಂದು ಹೇಳುತ್ತಿರುವ ʼನಕಲಿ ಅಭಿವೃದ್ಧಿಗೆʼ ಉಪಚುನಾವಣೆ, ಪರಿಷತ್ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜನ ಉತ್ತರ ಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ, ಬಿಜೆಪಿ ನಾಯಕರು ಪ್ರಚೋದನಕಾರಿಯಾಗಿ ಮಾತನಾಡುವುದು ಹೊಸದೇನಲ್ಲ. ಇದು ಅವರ ಹತಾಶೆಯನ್ನು ತೋರುತ್ತದೆ. ರಾಮನಗರದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿವಿ ಸ್ಥಾಪನೆಗೆ ತಡೆಯೊಡ್ಡಿ, ಈಗ ಅಭಿವೃದ್ಧಿಯ ಬಗ್ಗೆ ಯಾರು ಮಾತನಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. 2023ರ ಚುನಾವಣೆಯಲ್ಲಿ ʼನಕಲಿ ಅಭಿವೃದ್ಧಿಗೆʼ ಜನ ಪಾಠ ಕಲಿಸುತ್ತಾರೆ.ಬಿಜೆಪಿ ನಾಯಕರು ಪ್ರಚೋದನಕಾರಿಯಾಗಿ ಮಾತನಾಡುವುದು ಹೊಸದೇನಲ್ಲ. ಇದು ಅವರ ಹತಾಶೆಯನ್ನು ತೋರುತ್ತದೆ. ರಾಮನಗರದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿವಿ ಸ್ಥಾಪನೆಗೆ ತಡೆಯೊಡ್ಡಿ, ಈಗ ಅಭಿವೃದ್ಧಿಯ ಬಗ್ಗೆ ಯಾರು ಮಾತನಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. 2023ರ ಚುನಾವಣೆಯಲ್ಲಿ ʼನಕಲಿ ಅಭಿವೃದ್ಧಿಗೆʼ ಜನ ಪಾಠ ಕಲಿಸುತ್ತಾರೆ ಎಂದು ಶಿವಕುಮಾರ್ ಹೇಳಿದ್ದಾರೆ.
