ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ಖಚಿತ: ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವುದು ನೂರಕ್ಕೆ ನೂರು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಜನರ ತೀರ್ಪು ಇಂದು ಹೊರಬಿದ್ದಿದೆ. ಚುನಾವಣೆಯಾದ 1187 ಸ್ಥಾನಗಳ ಪೈಕಿ 500 ಕ್ಕೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿದೆ. ಫಲಿತಾಂಶದಿಂದ ಜನಾಭಿಪ್ರಾಯ ನಮ್ಮ ಪರವಾಗಿದೆ ಎಂಬುದು ಕಂಡು ಬರುತ್ತದೆ. ಈ ಫಲಿತಾಂಶ ನಮಗೆ ಖುಷಿ ಕೊಟ್ಟಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಹಣ ಖರ್ಚು ಮಾಡಿ ಗೆಲ್ಲುತ್ತೇವೆ ಎಂದು ಬಿಜೆಪಿಯವರು ಜಂಭದಿಂದ ವರ್ತಿಸುತ್ತಾರೆ, ಆದರೆ ಬರೀ ಹಣವೊಂದೆ ಚುನಾವಣೆಯಲ್ಲಿ ಗೆಲ್ಲಲು ಸಾಕಾಗಲ್ಲ. ಜನರ ಪರವಾಗಿ ಕೆಲಸ ಮಾಡಬೇಕು, ಪ್ರಾಮಾಣಿಕ ಆಡಳಿತ ಕೊಡಬೇಕು. ಆಗ ಜನ ಮತ ನೀಡುತ್ತಾರೆ ಎಂದು ಹೇಳಿದರು.
ದೇಗುಲಗಳಿಗೆ ತೊಂದರೆ ಹೆಚ್ಚು
ಹಿಂದೂ ದೇವಾಲಯಗಳನ್ನು ಸರ್ಕಾರ ಅಭಿವೃದ್ಧಿ ಪಡಿಸುವ ಕೆಲಸ ಮಾಡಿದರೆ ನಮ್ಮ ತಕರಾರು ಖಂಡಿತಾ ಇಲ್ಲ. ಸಾರಾಸಗಟಾಗಿ ಎಲ್ಲಾ ದೇವಾಲಯಗಳನ್ನು ಸ್ವತಂತ್ರಗೊಳಿಸುವ ಮೊದಲು ದೇವಾಲಯಗಳ ಆರ್ಥಿಕ ಪರಿಸ್ಥಿತಿಯನ್ನು ಒಮ್ಮೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಕಾರಣ ರಾಜ್ಯದ ಸಾಕಷ್ಟು ದೇವಾಲಯಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ, ಅವುಗಳನ್ನು ಸ್ವತಂತ್ರಗೊಳಿಸಿದರೆ ದೇವಾಲಯ ನಡೆಸಿಕೊಂಡು ಹೋಗುವುದು ಕಷ್ಟವಾಗಿ ಉಪಕಾರಕ್ಕಿಂತ ತೊಂದರೆಯೇ ಹೆಚ್ಚಾಗುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
