ರಾಜಕೀಯಕ್ಕಾಗಿ ಕೋವಿಡ್ ಬಗ್ಗೆ ಕಾಂಗ್ರೆಸ್ ಗೊಂದಲದ ಹೇಳಿಕೆ: ಸಚಿವ ಸುಧಾಕರ್ ಆರೋಪ

ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾಂಗ್ರೆಸ್ ನಾಯಕರು ತಮ್ಮ ನಿರಾಧಾರ, ಸತ್ಯಕ್ಕೆ ದೂರವಾದ ಆರೋಪಗಳ ಮೂರನೇ ಅಲೆಯನ್ನು ಮುಂದುವರೆಸಿರುವುದು ವಿಷಾದಕರ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಕರ್ನಾಟಕದಲ್ಲಿ ಕೋವಿಡ್ ಮರಣ ಪ್ರಮಾಣ ಕೇವಲ 1% ಇದ್ದು, ಮೂರನೇ ಅಲೆಯಲ್ಲಿ 1.9% ಜನ ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಗೆ ತಿರುಗೇಟು ನೀಡಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ ಇದಕ್ಕೆ ಮುಖ್ಯ ಕಾರಣ ಲಸಿಕಾಕರಣ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಹಕಾರದಿಂದ ರಾಜ್ಯದಲ್ಲಿ 18+ ವಯೋಮಾನದವರಿಗೆ 100% ಮೊದಲ ಡೋಸ್ ಪೂರೈಸಿದ್ದು, 87.6% ಜನರಿಗೆ ಎರಡೂ ಡೋಸ್ ನೀಡಲಾಗಿದೆ. ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕತರು, ಹಿರಿಯ ನಾಗರೀಕರಲ್ಲಿ 51% ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಂಕ್ರಾಮಿಕದ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ನೀಡುವುದು ಬಿಟ್ಟು ರಾಜಕೀಯ ಲಾಭ ಪಡೆಯಲು ವಿನಾಕಾರಣ ಟೀಕೆ ಮಾಡುವುದು ಎಷ್ಟು ಸರಿ? ಕೊರೊನಾ ಎಂಬುದೇ ಇಲ್ಲ, ಅದು ಬಿಜೆಪಿ ಸೃಷ್ಟಿ ಎನ್ನುವ ಅಧ್ಯಕ್ಷರು ಒಂದು ಕಡೆ, ಕೊರೊನಾ ನಿಯಂತ್ರಣದ ಬಗ್ಗೆ ಮಾತನಾಡುವ ಪ್ರತಿಪಕ್ಷ ನಾಯಕರು ಇನ್ನೊಂದು ಕಡೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು? ಎಂದು ಪ್ರಶ್ನಿಸಿದ್ದಾರೆ.
