ಬೌದ್ಧ ಧರ್ಮದ ಬಗ್ಗೆ ಸಚಿವರ ಅವಹೇಳನಕಾರಿ ಹೇಳಿಕೆಗೆ ಖಂಡನೆ

ದೇವನಹಳ್ಳಿ: ಭಾರತವನ್ನು ಬೌದ್ಧ ಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರು ಎಂಬ ಸಚಿವ ಸುಧಾಕರ್ ಅವರ ಹೇಳಿಕೆಯನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳಿಂದ ಸೋಮವಾರ ದೇವನಹಳ್ಳಿಯಲ್ಲಿ ಪ್ರತಿಭಟನೆ ನಡೆಯಿತು.
ಚಿಕ್ಕಬಳ್ಳಾಪುರದಲ್ಲಿ ಮಾರ್ಚ್ 1ರಂದು ಬ್ರಾಹ್ಮಣರ ಸಭೆಯೊಂದರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಬೌದ್ಧ ಧರ್ಮದ ಅಪಾಯದಿಂದ ಭಾರತವನ್ನು ಕಾಪಾಡಿದ ಹೆಗ್ಗಳಿಕೆಗೆ ಬ್ರಾಹ್ಮಣರಿಗೆ ಸಲ್ಲಬೇಕು ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಪ್ರಾಚೀನ ಭಾರತದ ಇತಿಹಾಸವೆಂದರೆ ಬೌದ್ದ ಧರ್ಮಕ್ಕೂ ಬ್ರಾಹ್ಮಣ ಧರ್ಮಕ್ಕೂ ನಡೆದ ಸಂಘರ್ಷವಲ್ಲದೆ ಬೇರೆ ಏನು ಅಲ್ಲ ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು,
ಸಹಮಾನವರನ್ನು ಮಾನವರನ್ನಾಗಿ ಕಾಣದ ಬ್ರಾಹ್ಮಣ ಧರ್ಮದ ಕಂದಾಚಾರಗಳನ್ನು ಬಯಲು ಗೊಳಿಸಿ ಮನುಷ್ಯರು ಮನುಷ್ಯರನ್ನಾಗಿ ಬದುಕಲು ಪ್ರೇರಣೆ ನೀಡಿದ ಭೌದ್ದ ಧರ್ಮದ ಬಗ್ಗೆ ಕೇವಲ ಬ್ರಾಹ್ಮಣರನ್ನು ಓಲೈಸುವುದಕ್ಕಾಗಿ ಜವಾಬ್ದಾರಿಯುತ ಸ್ಥಾನದಲ್ಲಿರವ ಸಚಿವರು ಇಂತಹ ಕೀಳು ಮಟ್ಟಕ್ಕೆ ಇಳಿದಿರುವುದು ಖಂಡನೀಯ ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು, ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಮಾವಳ್ಳಿ ಶಂಕರ್ ಒತ್ತಾಯಿಸಿದರು.
