Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಮುಂದುವರಿದ ಸ್ವಾಮೀಜಿ-ಸಚಿವ ನಿರಾಣಿ ಕೋಲ್ಡ್ ವಾರ್, ಕೂಡಲಸಂಗಮ ಶ್ರೀಗಳಿಗೆ ಬಹಿರಂಪತ್ರ !

ಬೆಂಗಳೂರು: ಪಂಚಮಶಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮಿ ಹಾಗೂ ಸಚಿವ ಮುರುಗೇಶ್ ನಿರಾಣಿ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಪಂಚಮಶಾಲಿಗಳಿಗೆ ಮೂರನೇ ಪೀಠ ಸ್ಥಾಪಿಸಲು ನಿರಾಣಿ ಮುಂದಾಗುತ್ತಿದ್ದಂತೆ ಕೆರಳಿರುವ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಠಕ್ಕೆ ನಿರಾಣಿ ಅವರು ಕೊಟ್ಟ ದಾನವನ್ನು ಜೋಳಿಗೆಗೆ ಹಾಕಿ ಮರಳಿಸುತ್ತೇನೆ ಎಂದು ಬುಧವಾರ ನೀಡಿರುವ ಹೇಳಿಕೆ ಸಂಬಂಧ ನಿರಾಣಿ ಅಭಿಮಾನಿಗಳು ಎನ್ನಲಾದ ಕೆಲವರು ಪ್ರತ್ಯಕ್ಷವಾಗಿ ಕಂಡರೂ, ಪ್ರಮಾಣಿಸಿ ನೋಡಿ. ಮುರುಗೇಶ ನಿರಾಣಿಯವರ ವಿಚಾರದಲ್ಲಿ ತಪ್ಪು ಗ್ರಹಿಕೆ ಬೇಡ ಎಂದು ಸ್ವಾಮೀಜಿಗೆ ಬಹಿರಂಗ ಪತ್ರ ಬರೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಪತ್ರದ ಪೂರ್ಣಪಾಠ ಈ ರೀತಿ ಇದೆ.

ಬಸವಜಯ ಮೃತ್ಯುಂಜಯ ಸ್ವಾಮೀಜಿ ಮುರುಗೇಶ ನಿರಾಣಿಯವರನ್ನು ಗುರಿಯಾಗಿಸಿಕೊಂಡು ಮಾಡಿರುವ ಆರೋಪ ಹಾಗೂ ಅವರು ಕೊಟ್ಟ ದಾನವನ್ನು ಜೋಳಿಗೆ ಹಾಕಿ ಮರಳಿಸುತ್ತೇನೆ ಎಂಬ ಹೇಳಿಕೆ ತೀವ್ರ ಬೇಸರ ತರಿಸಿದೆ.

ನಾವೆಲ್ಲ ಕಂಡ ಹಾಗೆ ಮುರುಗೇಶ ನಿರಾಣಿಯವರು ಹಾಗೂ ಅವರ ಪರಿವಾರ ಕೂಡಲ ಸಂಗಮ ಹಾಗೂ ಹರಿಹರ ಎರಡು ಪೀಠಗಳನ್ನು ಸಮದೃಷ್ಟಿಯಿಂದ ಹಾಗೂ ಸಮಭಾವದಿಂದ ನೋಡಿಕೊಂಡು ಬಂದಿದ್ದಾರೆ ಎಂದೂ ತಾರತಮ್ಯ ಮಾಡಿಲ್ಲ. ಕೇವಲ ಪಂಚಮಸಾಲಿ ಮಠಗಳಷ್ಟೆ ಅಲ್ಲ, ಸಮಾಜದ ಎಲ್ಲ ಮಠಗಳನ್ನು ಸಮವಾಗಿ ನೋಡುತ್ತ ಬಂದಿದ್ದಾರೆ. ದಾನ-ಧರ್ಮ ಮಾಡುವುದರಲ್ಲಿಯೂ ಸಮಾನತೆ ತೋರಿದ್ದಾರೆ. ಅವರೆಂದೂ ಪ್ರತಿಫಲ ಬಯಸಿ ಸೇವೆ ಮಾಡಿದವರಲ್ಲ. ಸುದ್ದಿಗಾಗಿಯೂ ಸೇವೆ ಮಾಡಲಿಲ್ಲ. ಆತ್ಮತೃಪ್ತಿಗಾಗಿ, ಸರ್ವ ಸಮಾಜದ ಶ್ರೇಯೋಭಿವೃದ್ದಿಗಾಗಿ ಸೇವಾ ಕೈಂಕರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ನಿರಾಣಿಯವರಾಗಲಿ ಹಾಗೂ ಅವರ ಸಹೋದರರಾಗಲಿ ಎಡಗೈಗೆ ಕೊಟ್ಟದ್ದು ಬಲಗೈಗೆ ಗೊತ್ತಾಗಬಾರದು ಎಂಬಂತೆ ದಾನ ಧರ್ಮ ಮಾಡುವುದನ್ನು ರೂಢಿಯಾಗಿಸಿಕೊಂಡು ಬಂದಿದ್ದಾರೆ. ಅಂಥವರನ್ನು ಗುರಿಯಾಗಿಸಿಕೊಂಡು ಆಪಾದನೆ ಮಾಡುವುದು, ತೇಜೋವಧೆ ಮಾಡವುದು ಒಳ್ಳೆಯದಲ್ಲ.

ಆರೋಪದಲ್ಲಿ ಹುರುಳಿಲ್ಲ

ಜಯಮೃತ್ಯುಂಜಯ ಸ್ವಾಮೀಜಿಗಳು ಮಾಡುವ ಅರೋಪದಲ್ಲಿ ಹುರುಳಿಲ್ಲ. ಏಕೆಂದರೆ ಮುರುಗೇಶ ನಿರಾಣಿಯವರಾಗಲಿ ಅವರ ಪರಿವಾರದವರಾಗಲಿ ನೇರವಾಗಿ ಮಾಧ್ಯಮದ ಮುಂದೆ ಅಥವಾ ನೇರವಾಗಿ ಸ್ವಾಮೀಜಿಗೆ ಮತ್ತು ಆಪ್ತ ವರ್ಗದಲ್ಲಾಗಲಿ ಎಲ್ಲೂ ಹೇಳಿಲ್ಲ. ಅವರ ಹಿತೈಷಿಗಳೋ ಅಥವಾ ಬೆಂಬಲಿಗರೋ ಸ್ವಾಮೀಜಿ ಅಥವಾ ಅವರ ಆಪ್ತವಲಯದಲ್ಲಿ ಹೇಳಿಲ್ಲ. ಕೇವಲ ವ್ಯಾಟ್ಸಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅನಾಮಧೇಯವಾಗಿ ಯಾರೋ ಫಾರ್ವರ್ಡ್ ಮಾಡಿದ್ದನ್ನು ಆಧರಿಸಿ ಮಾಧ್ಯಮಗಳ ಮುಂದೆ ಬಂದು ಹೇಳಿ ವೃಥಾ ಆರೋಪ ಮಾಡುವುದು ಸಮಂಜಸವಲ್ಲ. ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡುವುದು ಉತ್ತಮವಲ್ಲವೇ? ಈ ರೀತಿಯ ತಪ್ಪು ನಿರ್ಧಾರವನ್ನು ದೇಶದ ಯಾವ ಮಠಾಧೀಶರು ತೆಗೆದುಕೊಂಡಿಲ್ಲ. ಇದರಿಂದ ಪಂಚಮಸಾಲಿ ಸಮಾಜವು ಮುಜುಗರ ಅನುಭವಿಸಬೇಕಾಗಬಹುದು.

ಫೋನ್ ಮಾಡಬಹುದಿತ್ತು

ಇಷ್ಟಕ್ಕೂ ಪಂಚಮಸಾಲಿ ಸಮಾಜ ಎನ್ನುವುದು ಮಹಾಮನೆ ಇದ್ದಂತೆ. ಇಲ್ಲಿಯ ಭಿನ್ನಾಭಿಪ್ರಾಯಗಳನ್ನು ಪ್ರತಿ ಬಾರಿಯೂ ಮಾದ್ಯಮದ ಮುಂದೆ ಹೇಳುವುದು ತರವಲ್ಲ. ಜಯ ಮೃತ್ಯುಂಜಯ ಸ್ವಾಮೀಜಿಗಳು ಮಾಧ್ಯಮದ ಮುಂದೆ ಬಂದಷ್ಟು ಯಾವ ಮಠಾಧೀಶರು ಮಾಧ್ಯಮದ ಮುಂದೆ ಬಂದಿಲ್ಲ. ಬಹಿರಂಗವಾಗಿ ಹೇಳಿಕೆ ನೀಡುವ ಬದಲು ನೀವೇ  ಫೋನ್ ಮೂಲಕವೋ ಅಥವಾ ನೆರವಾಗಿಯೇ ಮುರುಗೇಶ ನಿರಾಣಿಯವರಿಗೆ ಕೇಳಬಹುದಿತ್ತಲ್ಲ! ಅವರೇನೂ ಹೊರಗಿನವರಲ್ಲ. ನಿಮ್ಮ ಪಕ್ಕದಲ್ಲಿರುವ ಅವರಿಬ್ಬರೂ ಮುರುಗೇಶ ನಿರಾಣಿಯವರ ಜೊತೆಗೆ ಮಾತನಾಡದಷ್ಟು ನಿಮ್ಮನ್ನು ಬಿಗಿ ಮಾಡಿಟ್ಟರೇ?

ಧರ್ಮಗುರುಗಳಾದವರು ಯಾರ ಮಾತಿಗೂ ಕಿವಿಯಾಗಬೇಡಿ. ನಿಮ್ಮ ಘನತೆ ಸಮಾಜದ ಘನತೆಯನ್ನು ಪ್ರತಿಬಿಂಬಿಸುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಜೋಳಿಗೆ ಹಾಕಿದ ಸಿದ್ದಗಂಗೆಯ ಶಿವಕುಮಾರ ಶ್ರೀಗಳು ಹುಟ್ಟಿದ ಪಾವನ ನೆಲವಿದು. ಸಂತರ ಜೋಳಿಗೆ ಯಾರದ್ದೋ ಋಣ ತೀರಿಸಲೋ ಅಥವಾ ವೈಯಕ್ತಿಕ ಹಿತಾಸಕ್ತಿಗೋ ಬಳಕೆಯಾಗಬಾರದು ಎಂಬುದು ಸಮಾಜ ಬಾಂಧವರ ಇಂಗಿತ. ಮತ್ತೊಂದು ಪೀಠದ ವಿಷಯ ಆ ಸ್ವಾಮೀಜಿಗಳು ಸಮಾಜಕ್ಕೆ ಸೇವೆ ಸಲ್ಲಿಸಲು ಮಾಡಿಕೊಂಡ ವ್ಯವಸ್ಥೆ. ಪೀಠಗಳು, ಮಠ ಮಾನ್ಯಗಳು, ಸಮಾಜ ಸಂಘಟನೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ, ದಾಸೋಹಕ್ಕೆ, ಧರ್ಮ ಪ್ರಚಾರಕ್ಕೆ ಹಾಗೂ ಸಮಾಜಕ್ಕೆ ಸಂಸ್ಕಾರ ಮಾಡಲು ಉಪಯೋಗವಾಗುವಂತಾದರೆ ಸಮಾಜ ಉದ್ಧಾರವಾಗುತ್ತದೆ. ಆದೆಸೆಯಿಂದಲೇ 3 ನೇ ಪೀಠದ ಮೇಲೆಯೂ ಹೊಸ ಭರವಸೆ ಇಟ್ಟು ಮುನ್ನಡೆಯೋಣ.‌

ನೀವು ಕೂಡಲಸಂಗಮ ಪೀಠಾಧಿಪತಿಯಾದಾಗಲು ಸಮಾಜ ನಿಮ್ಮನ್ನು ಮುಕ್ತವಾಗಿ ಸ್ವಾಗತಿಸಿದೆ. ನಿಮ್ಮನ್ನು ಬೆಳೆಸಿದೆ. ನೀವು ತುಂಬು ಮನಸ್ಸಿನಿಂದ ಹಾರೈಸಿ. ಅದು ನಿಮ್ಮ ಹಾಗೂ ನಮ್ಮ ಸಮಾಜದ ಹೃದಯ ವೈಶಾಲ್ಯತೆಯನ್ನು ಪ್ರತಿಬಿಂಬಿಸುತ್ತದೆ. ಒಳ್ಳೆಯದೋ, ಕೆಟ್ದದ್ದೋ ಅವರವರ ಬುತ್ತಿ ಅವರ ಹೆಗಲಿಗಿರುತ್ತದೆ. ಒಬ್ಬ ಸಾಮಾನ್ಯ ಪಂಚಮಸಾಲಿಯಾಗಿ ಇದು ನಮ್ಮ ಕಳಕಳಿ. ಉಳಿದದ್ದು ನಿಮ್ಮ ವಿವೇಚನೆಗೆ ಬಿಟ್ಟಿದ್ದು…

Spread the love

Related Articles

Leave a Reply

Your email address will not be published. Required fields are marked *

Back to top button