ಕಾಫಿ ಬೆಳೆಗಾರರೇ ಎಚ್ಚರ: ಮಲೆನಾಡಿನಲ್ಲಿದ್ದಾರೆ ಕಾಫಿ ಕಳ್ಳರು!

ಚಿಕ್ಕಮಗಳೂರು: ಕಾಫಿ ಬೆಳೆಗೆ ಬಂಪರ್ ಬೆಲೆ ಬಂದಿದೆ. 50ಕೆಜಿ ತೂಕದ ಚೀಲಕ್ಕೆ 15ಸಾವಿರ ಗಡಿ ದಾಟಿದೆ. ಅರೇಬಿಕಾ ಕಾಫಿಗೆ 15 ಸಾವಿರ ಗಡಿ ದಾಟಿದರೆ, ರೋಬಸ್ಟಾ ಬೆಳೆಗೆ 10ಸಾವಿರ ಗಡಿ ತನಕ ಬೆಲೆ ಬಂದಿದೆ. ಇದು ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ. ಇನ್ನೊಂದಡೆ ಉತ್ತಮ ಬೆಲೆ ಸಿಕ್ಕಿರುವುದು ಕಳ್ಳತನಕ್ಕೂ ದಾರಿ ಮಾಡಿಕೊಟ್ಟಿದೆ. ಹೀಗಾಗಿ ಕಳ್ಳರು ಕೂಡ ಕೈಚಳಕ ಪ್ರದರ್ಶಿಸುತ್ತಿದ್ದಾರೆ. ಕೆಲವೊಂದು ವರದಿಗಳು ಇಲ್ಲಿವೆ ನೋಡಿ
ಮಲೆನಾಡಿನಲ್ಲಿ ಕಾಫಿ ಮೂಟೆಯೊಂದಿಗೆ ಕಳ್ಳರು ಎಸ್ಕೇಪ್:
ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಹೆಚ್ಚಾಗಿ ಕಾಫಿಯನ್ನು ಬೆಳೆಯಲಾಗುತ್ತಿದೆ. ಅರೇಬಿಕಾ, ರೋಬಸ್ಟಾ ಬೆಳೆಯನ್ನು ಬೆಳೆಗಾರರು ಬೆಳೆಯುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಮಾರುಕಟ್ಟೆಯಲ್ಲಿ ಕಾಫಿಗೆ ಅತ್ಯಂತ ಕಡಿಮೆ ಬೆಲೆ ನಿಗದಿಯಾಗಿತು. ಆದರೆ ಈಗ ಕಾಫಿಗೆ ಉತ್ತಮ ಬೆಲೆ ಸಿಕ್ಕಿದ್ದು ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ. ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಶೃಂಗೇರಿ ಭಾಗದಲ್ಲಿ ಅತೀ ಹೆಚ್ಚಾಗಿ ಕಾಫಿ ಬೆಳೆಯುವ ಪ್ರದೇಶವಾಗಿದೆ.
ಈ ಭಾಗದಲ್ಲೇ ಈಗ ಇನ್ನೊಂದು ಆತಂಕವೂ ಶುರುವಾಗಿದೆ. ಕಾಫಿಗೆ ಉತ್ತಮ ಬೆಲೆ ಸಿಕ್ಕ ಕೂಡಲೇ ಕಳ್ಳತನದ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಮೂಡಿಗೆರೆ, ಬಾಳೆಹೊನ್ನೂರು, ಜಯಪುರ, ಕೊಪ್ಪ ಭಾಗಗಳಲ್ಲಿ ಕಾಫಿ ಮೂಟೆಗಳನ್ನೇ ಕಳ್ಳರು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದಾರೆ. ಮನೆ ಸೇರಿದಂತೆ ಕಣದಲ್ಲಿಇರುವ ಕಾಫಿ ಮೂಟೆಗಳು ಕಳ್ಳತನವಾಗಿರುವ ಬಗ್ಗೆ ಮಾಲೀಕರು ಪೋಲಿಸ್ ಠಾಣೆಗೆ ದೂರು ನೀಡುತ್ತಿದ್ದಾರೆ.
ಮಲೆನಾಡಿನ ಭಾಗದಲ್ಲಿ ಕಾಫಿ ಚೀಲಕ್ಕೆ ಕನ್ನ: ಓರ್ವನ ಬಂಧನ
ಕಾಫಿ ಮೂಟೆಗಳನ್ನು ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಚಿಕ್ಕಮಗಳೂರಿನ ಜಯಪುರ ಪೊಲೀಸರು ಕಾರ್ಯಾಚರಣೆಯ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ಕಲ್ಲುಗುಡ್ಡೆ ಗ್ರಾಮದ ಅಂದಕಲ್ಲು ನಿವಾಸಿ ರಾಘವೇಂದ್ರ ಅವರಿಗೆ ಸೇರಿದ ಕಾಫಿ ಮೂಟೆಗಳು ಮಾರ್ಚ್ 16 ರಂದು ಕಳ್ಳತನವಾಗಿತ್ತು. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆಗಿಳಿದ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾಫಿ ಕಳ್ಳನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಜಯಪುರದ ಕಲ್ಲುಗುಡ್ಡೆ ಗ್ರಾಮದ ಗಣಪತಿ ಕಟ್ಟೆ ನಿವಾಸಿ ಗೋಪಾಲ ಎಂದು ಗುರುತಿಸಲಾಗಿದೆ. ಈತನನ್ನು ಅನುಮಾನದ ಮೇರೆಗೆ ಪೊಲೀಸರು ವಿಚಾರಣೆ ನಡೆಸಿದಾಗ ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈತನಿಂದ 438 ಕೆ.ಜಿ ತೂಕದ 14 ಕಾಫಿ ಮೂಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಂಧಿತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಈ ಕಾರ್ಯಾಚರಣೆಯು ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಎಂ ಹೆಚ್ ಅವರ ಮಾರ್ಗದರ್ಶನದಲ್ಲಿ ಜಯಪುರ ಪಿಎಸೈ ಜ್ಯೋತಿ ಅವರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಎಎಸೈ ನಾಗರಾಜ, ಸತೀಶ, ಯಶಸ್ವಿಯಾಗಿದ್ದಾರೆ. ಒಟ್ಟಾರೆ ಪೊಲೀಸರು ಕಾರ್ಯಚರಣೆ ಮಲೆನಾಡಿನಲ್ಲಿ ಕಾಫಿ ಕಳ್ಳತನದಲ್ಲಿ ಭಾಗಿರುವ ಓರ್ವನನ್ನು ವಶಕ್ಕೆ ಪಡೆಯುಲಾಗಿದೆ. ಇನ್ನು ಹೆಚ್ಚಿನ ವಿಚಾರಣೆ, ತನಿಖೆಯನ್ನು ಪೊಲೀಸ್ರು ಕೈಗೊಂಡು ಮತ್ತಷ್ಟು ಆರೋಪಿಗಳು ಸಿಕ್ಕಿಬೀಳುವ ಸಾಧ್ಯತೆಗಳಿವೆ.
