ಅಡುಗೆ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷ: ಆತಂಕಗೊಂಡ ಕುಟುಂಬಸ್ಥರು

ಧಾರವಾಡ: ಅಡುಗೆ ಮನೆಯಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿ, ಮನೆಯ ಕುಟುಂಬಸ್ಥರಿಗೆ ಸೇರಿದಂತೆ ಅಕ್ಕ ಪಕ್ಕದವರಿಗೆ ಆತಂಕ ಮೂಡಿಸಿದ ಘಟನೆ ಅಳ್ನಾವಾರ ತಾಲೂಕಿನ ಕುಂಬಾರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಅಳ್ನಾವಾರ ತಾಲೂಕಿನ ಕುಂಬಾರಕೊಪ್ಪ ಗ್ರಾಮದ ಮಡವಾಳಿ ಬೂದಿಕೊಪ್ಪ ಎಂಬುವವರ ಅಡುಗೆ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಇದನ್ನು ನೋಡಿದ ಮನೆಯ ಮಹಿಳೆಯರು ಆತಂಕದಿಂದ ಮಕ್ಕಳನ್ನು ಕರೆದುಕೊಂಡು ಭಯದಲ್ಲಿ ಮನೆಯಿಂದ ಆಚೆ ಬಂದಿದ್ದಾರೆ. ಹಾವಿನ ಸುದ್ದಿ ತಿಳಿದ ಅಕ್ಕಪಕ್ಕದ ಮನೆಯವರು ಕೂಡಾ ಆತಂಕದಲ್ಲಿ ಮನೆಗಳಿಂದ ಹೊರ ಬಂದಿದ್ದು, ಬಳಿಕ ಸ್ನೇಕ್ ಕ್ಯಾಚರ್ ನವೀನ್ ಕುಬೊಜಿಯವರಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಉರಗ ಪ್ರೇಮಿ ನವೀನ್ ಹಾವು ಇದ್ದ ಜಾಗದಲ್ಲಿ ಶೋಧಿಸಿ, ಕೊನೆಗೆ ಹಾವನ್ನು ಜೀವಂತಾಗಿ ಹಿಡಿದು ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯಲ್ಲಿ ಹಿಡಿದ ಹಾವು ನಾಗರಹಾವು ಎಂದು ಖಚಿತ ಪಡಿಸಿರುವ ಸ್ನೇಕ್ ಕ್ಯಾಚರ್, ಸದ್ಯ ಹಾವನ್ಮು ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ಗ್ರಾಮಸ್ಥರ ಆತಂಕವನ್ನು ದೂರ ಮಾಡಿದ್ದಾರೆ.
