ಸಿ.ಎಂ.ಇಬ್ರಾಹಿಂ ವಿಷಯ: ಮಾಧ್ಯಮಗಳ ವಿರುದ್ಧ ಸಿಟ್ಟಾದ ಸಿದ್ದರಾಮಯ್ಯ

ಬೆಂಗಳೂರು: ಸಿ.ಎಂ.ಇಬ್ರಾಹಿಂ ಜತೆ ನಾನು ಮಾತನಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಸಿಟ್ಟಾದ ಅವರು, ವಿವಾದ ಸೃಷ್ಟಿಸಲು ಬಂದಿದ್ದೀರಿ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ನಿಮಗೆ ಹೇಳಿ-ಕೇಳಿ ಹೇಳಿಕೆ ನೀಡಬೇಕೆ? ಅವರ ಜತೆ ಮಾತನಾಡುತ್ತೇನೆ ಎಂದಷ್ಟೇ ಹೇಳಿ ಮುನ್ನಡೆದರು.
ಜೆಡಿಎಸ್ ಗೆ ಬಂದರೆ ಸ್ವಾಗತ
ಈ ನಡುವೆ ಜೆಡಿಎಸ್ ಗೆ ಬಂದರೆ ಮುಕ್ತ ಆಹ್ವಾನವಿದೆ. ಅವರಿಗೆ ಜೆಡಿಎಸ್ ಮೇಲೆ ವ್ಯಾಮೋಹ ಇದೆ. ಅವರ ಜತೆ ಹಲವು ಬಾರಿ ಚರ್ಚೆ ಮಾಡಿದ್ದೇವೆ. ಗುರುವಾರ ಬೆಳಗ್ಗೆಯೂ ಮಾತನಾಡಿದ್ದೇನೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ಟಾಂಗ್
ಈ ನಡುವೆ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ನಿರ್ಗಮನದ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಟ್ವಿಟ್ ಮಾಡಿ ಸಿದ್ದರಾಮಯ್ಯ ಕಾಲೆಳೆಯುವ ಪ್ರಯತ್ನವನ್ನು ರಾಜ್ಯ ಬಿಜೆಪಿ ಮಾಡಿದೆ.
ಕಾಂಗ್ರೆಸ್ ಪರಿಸ್ಥಿತಿ ಈಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಕಾಂಗ್ರೆಸ್ ಸೇರುವವರ ಪಟ್ಟಿ ನಮ್ಮಲಿದೆ ಎಂದು ಹೇಳುತ್ತಿರುವ ಕಾಂಗ್ರೆಸ್ ನಾಯಕರೇ, ಮೊದಲು ನಿಮ್ಮ ಪಕ್ಷದ ಬಾಗಿಲು ಭದ್ರಪಡಿಸಿಕೊಳ್ಳಿ. ಕಾಂಗ್ರೆಸ್ ಕಲಹದಿಂದಾಗಿ ಇಬ್ರಾಹಿಂ ಅವರು ಪಕ್ಷ ತೊರೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬೀಜ ಜಡಿಯುವ ಸಮಯ ದೂರವೇನಿಲ್ಲ ಎಂದು ಬಿಜೆಪಿ ಕಿಚಾಯಿಸಿದೆ.
