Breaking NewsLatestಮೆಟ್ರೋರಾಜ್ಯಶಿಕ್ಷಣಸುದ್ದಿ

ಪದವಿ ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಗಳಿಗೆ ಸಿಎಂ ಒಪ್ಪಿಗೆ: ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ರಾಜ್ಯದ ಎಲ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕಬೇಕೆನ್ನುವುದೇ ಸರಕಾರದ ಸಂಕಲ್ಪವಾಗಿದೆ. ಈ ವಿಷಯದಲ್ಲಿ ವ್ಯವಸ್ಥೆಯ ಸುಧಾರಣೆಯ ಕಡೆಗೆ ಆದ್ಯತೆ ಕೊಡಬೇಕೇ ವಿನಃ ವೈಯಕ್ತಿಕ ಪ್ರತಿಷ್ಠೆಯಿಂದ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಧರಣಿಗೆ ಮುಂದಾಗಿದ್ದು ಸರಿಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ತಾವು ಪ್ರತಿನಿಧಿಸುತ್ತಿರುವ ಹೊಳೆನರಸೀಪುರದಲ್ಲಿರುವ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮನೋವಿಜ್ಞಾನ ಮತ್ತು ಫುಡ್ & ನ್ಯೂಟ್ರಿಷನ್ ವಿಷಯಗಳಲ್ಲಿ ಎಂ.ಎಸ್ಸಿ ಪದವಿ ಆರಂಭಿಸಲು ಉನ್ನತ ಶಿಕ್ಷಣ ಸಚಿವರು ಅಡ್ಡಗಾಲು ಹಾಕುತ್ತಿದ್ದಾರೆಂದು ಆರೋಪಿಸಿ ರೇವಣ್ಣ ಅವರು ಮುಖ್ಯಮಂತ್ರಿಗಳ ಗೃಹಕಚೇರಿ ಎದುರು ಧರಣಿ ನಡೆಸಲು ಮಂಗಳವಾರ ಮುಂದಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಸಚಿವರು ಮಾರುತ್ತರ ನೀಡಿದರು.

ರಾಜ್ಯದಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಇನ್ನೂ 8-10 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಒಂದು ಕಾಲೇಜೂ ಇಲ್ಲ. ಈಗಿರುವ ಕಾಲೇಜುಗಳಲ್ಲೇ ಮೂಲಸೌಲಭ್ಯ, ಪ್ರಯೋಗಾಲಯ ಮತ್ತು ಸಿಬ್ಬಂದಿ ಕೊರತೆ ತೀವ್ರವಾಗಿದೆ. ಮೂಲಸೌಲಭ್ಯ ಸುಧಾರಣೆಗೆ 3,000 ಕೋಟಿ ರೂ. ಅಗತ್ಯವಿದೆ. ಜತೆಗೆ, ಈಗಿರುವ ಸ್ನಾತಕೋತ್ತರ ಕೇಂದ್ರಗಳನ್ನೇ ಸುಧಾರಿಸಬೇಕಾದ ತುರ್ತಿದೆ. ಹೀಗಾಗಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಎರಡು ವರ್ಷಗಳಿಂದ ಸ್ನಾತಕೋತ್ತರ ಕೋರ್ಸುಗಳನ್ನು ಆರಂಭಿಸಲು ಅನುಮತಿ ನೀಡುತ್ತಿಲ್ಲ. ಸ್ವತಃ ಸಚಿವರಾಗಿ ಅನುಭವವಿರುವ ರೇವಣ್ಣನವರಿಗೆ ಇದು ಗೊತ್ತಿಲ್ಲವೇ?’ ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ವಿವಿ ವ್ಯಾಪ್ತಿಯಲ್ಲೇ ಇರಬೇಕು

ಸ್ನಾತಕೋತ್ತರ ಕೋರ್ಸುಗಳು ವಿಶ್ವವಿದ್ಯಾಲಯದ ಮಟ್ಟದಲ್ಲೇ ಇರುವುದು ಶೈಕ್ಷಣಿಕವಾಗಿ ಒಳ್ಳೆಯದು. ಪದವಿ ಮತ್ತು ಸ್ನಾತಕೋತ್ತರ ಪದವಿ ಮಟ್ಟಗಳಲ್ಲಿ ಒಬ್ಬರೇ ಬೋಧಕರಿದ್ದರೆ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತದೆ ಎನ್ನುವುದು ಅಧ್ಯಯನಗಳಿಂದ ದೃಢಪಟ್ಟಿದೆ ಎಂದು ಸಚಿವರು ಪ್ರತಿಪಾದಿಸಿದರು.    

ಸ್ಮಾರ್ಟ್ ತರಗತಿಗೆ ಸಿಎಂ ಒಪ್ಪಿಗೆ

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇರುವ 9 ಸಾವಿರ ತರಗತಿಗಳಲ್ಲಿ 2,500 ತರಗತಿಗಳನ್ನು ಸ್ಮಾರ್ಟ್ ಕ್ಲಾಸ್ ರೂಮುಗಳನ್ನಾಗಿ ಮಾಡಲಾಗಿದೆ. ಉಳಿದ 6,500 ಕೊಠಡಿಗಳನ್ನೂ ಸ್ಮಾರ್ಟ್ ಕ್ಲಾಸ್ ರೂಮ್ ಮಾಡಲು  ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ ’ ಎಂದು ಅವರು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button