
ನವದೆಹಲಿ: ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲ್ಲಲಿದೆ ಎಂದು “ಸಿ-ವೋಟರ್” ಸಂಸ್ಥೆ ಸಮೀಕ್ಷೆ ತಿಳಿಸಿದೆ. ಮೊದಲ ಹಂತದ ಮತದಾನಕ್ಕೆ ಮೂರು ದಿನಗಳಿರುವಾಗ ಸಂಸ್ಥೆಯ ಈ ಸಮೀಕ್ಷೆ ಹೊರಬಿದ್ದಿದೆ. ಇದೇ ಜ.10 ರಂದು ಯುಪಿಯಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಮತ್ತೆ ಗೆದ್ದರೂ ಸ್ಥಾನಗಳಿಕೆಯಲ್ಲಿ ಭಾರಿ ಸಂಖ್ಯೆಯಲ್ಲಿ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ. ಇದೇ ರೀತಿ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಬಹುಮತದ ಅಂಚಿನಲ್ಲಿದೆ. ಉತ್ತರಾಖಂಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಈ ಬಾರಿ 225 ರಿಂದ 237 ಸ್ಥಾನ ಗೆಲ್ಲುವ ಮೂಲಕ ಬಹುಮತ ಪಡೆಯಲಿದೆ. ಸಮಾಜವಾದಿ ಪಕ್ಷದ ಮೈತ್ರಿಕೂಟ 139 ರಿಂದ 151ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬಹುದು ಎಂದು ತಿಳಿಸಲಾಗಿದೆ. ಮಾಯಾವತಿ ನೇತೃತ್ವದ ಬಿಎಸ್ ಪಿ 13 ರಿಂದ 21 ಸ್ಥಾನಗಳಿಗೆ ಮತ್ತು ಕಾಂಗ್ರೆಸ್ 4 ರಿಂದ 8 ಸ್ಥಾನ ಗೆಲ್ಲಬಹುದು ಎಂದು ಹೇಳಲಾಗಿದೆ.
ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ 55 ರಿಂದ 63 ಸ್ಥಾನ ದಕ್ಕಬಹುದು. ಕಾಂಗ್ರೆಸ್ 24 ರಿಂದ 30ಸ್ಥಾನಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ. ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಸಂಸದ ಭಗವಂತ್ ಮಾನ್ ರನ್ನು ಹಾಗೂ ಕಾಂಗ್ರೆಸ್ ದಲಿತ ಸಿಎಂ ಚರಣ್ ಜಿತ್ ಸಿಂಗ್ ಅವರನ್ನೇ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಎಂದು ಘೋಷಿಸಿದೆ. ಇದರ ಹೊರತಾಗಿಯೂ ಆಪ್ ಅಲ್ಲಿ ಸರ್ಕಾರ ರಚಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
