ಪೊಲೀಸರ ಸಮಯಪ್ರಜ್ಞೆ: ಬದುಕಿತು ಬಡ ಕೋಣ-ಬಲಿಯಿಂದ ಬಚಾವ್!

ದಾವಣಗೆರೆ: ಹರಿಹರ ಪಟ್ಟಣದಲ್ಲಿ ಇಂದಿನಿಂದ ಆರಂಭವಾಗಿರುವ ಗ್ರಾಮದೇವತೆಯ ಜಾತ್ರಾ ಮಹೋತ್ಸವದ ವೇಳೆ ದೇವಿಗೆ ಬಲಿಕೊಡಲು ಉದ್ದೇಶಿಸಿದ್ದ ಕೋಣವನ್ನು ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.
ಇಂದಿನಿಂದ ಮಾ. 26 ರವರೆಗೆ ವಿಜೃಂಭಣೆಯಿಂದ ನಡೆಯುವ ಅರುವತ್ತಾರು ಹಳ್ಳಿ ಒಡತಿಯ ಊರಮ್ಮನ ಜಾತ್ರಾ ಮಹೋತ್ಸವವು ಪ್ರಾರಂಭಗೊಂಡಿದ್ದು, ಸಂಪ್ರದಾಯದ ಪ್ರಕಾರ ದೇವಿಗೆ ಕೋಣ ಬಲಿ ಕೊಡುವ ಪದ್ಧತಿ ನಡೆಸಲು ನಿರ್ಧರಿಸಲಾಗಿತ್ತು. ಪ್ರಾಣಿ ಬಲಿ ನಿಷೇಧಿಸಿದ್ದು, ಸರ್ಕಾರದ ಆದೇಶದ ಮಾರ್ಗಸೂಚಿ ಅನ್ವಯ ಮುಂಜಾಗ್ರತಾ ಕ್ರಮವಾಗಿ ಕೋಣವನ್ನು ವಶಕ್ಕೆ ಪಡೆದು ಪೊಲೀಸ್ ಠಾಣಾ ಆವರಣದಲ್ಲಿ ಕಟ್ಟಿ ಹಾಕಲಾಗಿದೆ.
ಈ ವೇಳೆ ವೃತ್ತ ನಿರೀಕ್ಷಕ ಯು. ಸತೀಶ್ ಕುಮಾರ್ ಮಾತನಾಡಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿದ್ದು ಜನ ದಟ್ಟಣೆ ಸಂಚಾರ ಹೆಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರೀ ವಾಹನಗಳ ನಗರ ಸಂಚಾರಿ ಮಾರ್ಗವನ್ನು ಬದಲಾವಣೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನುಕೂಲ ಮಾಡಿ ಕಾನೂನು, ಶಾಂತಿ, ಸುವ್ಯವಸ್ಥೆ ಕಾಪಾಡಿ ಭಕ್ತಿ ಭಾವದಿಂದ ಊರಮ್ಮನ ದೇವಿಯ ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಮಾಡುವ ಜತೆಗೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಾಚೇನಹಳ್ಳಿ ಕಸಬಾ ಮತ್ತು ದೇವಸ್ಥಾನದ ಇತರೆ ಪ್ರದೇಶಗಳಲ್ಲಿ ಸೂಕ್ತ ಪೊಲೀಸ್ ಇಲಾಖೆ ಬಂದೋಬಸ್ತ್ ಏರ್ಪಡಿಸಿ ಜಾತ್ರೆಯು ಸುಗಮವಾಗಿ ನಡೆಯುವುದಕ್ಕೆ ಅನುವು ಮಾಡಲಾಗಿದೆ ಎಂದರು.
ನಗರಠಾಣೆ ಪಿಎಸ್ ಐ ಸುನಿಲ್ ಬಸವರಾಜ ತೇಲಿ ಮಾತನಾಡಿ ಗ್ರಾಮ ದೇವತೆಗಳ ಉತ್ಸವ ಸಮಿತಿಗೆ ಈಗಾಗಲೇ ಪೂರ್ವ ಭಾವಿ ಸಭೆಯನ್ನು ಮಾಡಲಾಗಿ ಜಾತ್ರೆಯಲ್ಲಿ ನಡೆಯುವಂಥ ಎಲ್ಲಾ ವಿಷಯವನ್ನು ಪಡೆದುಕೊಂಡು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ವತಿಯಿಂದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಈಗಾಗಲೇ ಭಾರೀ ವಾಹನಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ ಹಿರಿಯರು, ಮುಖಂಡರು ಹಾಗೂ ಯುವಕರು ದ್ವೇಷ, ಅಸೂಯೆ ಎಲ್ಲವನ್ನೂ ಮರೆತು ಆರೋಗ್ಯಕರವಾದ ವಾತಾವರಣದಲ್ಲಿ ಶ್ರೀ ಅಮ್ಮನವರ ಜಾತ್ರೆಯನ್ನು ಭಕ್ತಿ ಭಾವದಿಂದ ಆಚರಿಸಬೇಕು. ಹರಿಹರ ತಾಲ್ಲೂಕಿನ ಜನತೆ ಶಾಂತಿ ಪ್ರಿಯರು ಎಂಬ ಇತಿಹಾಸವಿದೆ. ಯಾವುದೇ ಅವಘಡಗಳು ಸಂಭವಿಸದಂತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದ ರೀತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿ ಮಾಡೋಣ ಎಂದರು
ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ಮಾತನಾಡಿ ದೇವರು ಧರ್ಮದ ಹೆಸರಿನಲ್ಲಿ ಜಾತ್ರಾ ಮಹೋತ್ಸವಗಳಲ್ಲಿ ಧಾರ್ಮಿಕ ಆಚರಣೆಗಳಿಂದ ದೇವಾಲಯಗಳಲ್ಲಿ ಪ್ರತಿ ವರ್ಷ ಕರ್ನಾಟಕದಲ್ಲಿ 1.5 ಕೋಟಿ ಪ್ರಾಣಿಗಳನ್ನು ಮೂಢನಂಬಿಕೆಯಿಂದ ಬಲಿ ಕೊಡಲಾಗುತ್ತದೆ. ಪ್ರಾಣಿ ಬಲಿ ಕೊಡುವ ವ್ಯವಸ್ಥೆಯನ್ನು ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಮೂಢ ನಂಬಿಕೆ ಆಚರಣೆಗಳನ್ನು ತಡೆಯಬೇಕೆಂದು ಮನವಿ ಮಾಡಿದರು.
