ಅಕ್ರಮ ಮದ್ಯ, ಗಾಂಜಾ, ಪುಂಡಪೋಕರಿಗಳ ಕಿಡಿಗೇಡಿತನಕ್ಕೆ ಬ್ರೇಕ್ ಹಾಕಿ…!

ದಾವಣಗೆರೆ: ಅಕ್ರಮ ಮದ್ಯಕ್ಕೆ ಬ್ರೇಕ್ ಹಾಕಿ. ಮದ್ಯ ಮಾರಾಟ ನಿಲ್ಲಿಸಿ. ಪುಂಡಪೋಕರಿಗಳ ಹಾವಳಿ ಹೆಚ್ಚಿದ್ದು, ಕಾನೂನಿನ ಪ್ರಕಾರ ಶಿಕ್ಷೆಗೊಳಪಡಿಸಿ. ವಿಧವಾ ವೇತನ, ಜಮೀನಿನ ಖಾತೆ ನೋಂದಣಿ, ಬಸ್ ವ್ಯವಸ್ಥೆ, ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಪರಿಹಾರ, ನಿಗಮಗಳಲ್ಲಿ ಸಾಲ ಸೌಲಭ್ಯ, ಆಶ್ರಯ ಯೋಜನೆಯಡಿ ವಸತಿ ಸೌಲಭ್ಯ.. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಜನರು ತೆರೆದಿಟ್ಟರು.
ಜಿಲ್ಲಾಡಳಿತ ಭವನದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಜನರ ಅವಹಾಲುಗಳ ಸ್ವೀಕಾರ ನಡೆಯಿತು.ಗಾಂಧಿನಗರದ ನಿವಾಸಿ ಶಶಿಕಲಾ ಎಂಬ ವಿಕಲಚೇತನ ಮಹಿಳೆ ಯಂತ್ರಚಾಲಿತ ದ್ವಿಚಕ್ರ ವಾಹನ ಮತ್ತು ಆಧಾರ ಸಾಲ ಕೋರಿ ಮನವಿ ಸಲ್ಲಿಸಿದರು. ಸ್ಪಂದಿಸಿದ ಜಿಲ್ಲಾಧಿಕಾರಿಗಳು ವಿಕಲಚೇತನ ಮಹಿಳೆಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಹಾಗೂ ಆಧಾರ ಸಾಲ ಸೌಲಭ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಜಿಲ್ಲಾ ವಿಕಲಚೇತನರ ಅಧಿಕಾರಿಗೆ ಸೂಚಿಸಿದರು.
ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಳೇಶ್ವರ ಅವರು, ನಗರದ ಎಪಿಎಂಸಿ ಯಾರ್ಡ್ ಫ್ಲೈಓವರ್ ಮೇಲೆ ಅಳವಡಿಸಲಾಗಿರುವ ವಿದ್ಯುತ್ ದೀಪಗಳು ರಾತ್ರಿ ವೇಳೆಯಲ್ಲಿ ಉರಿಯುತ್ತಿಲ್ಲ. ಕೆಲ ಪುಂಡ ಹುಡುಗರು ರಸ್ತೆ ಮೇಲೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಇದರಿಂದ ಓಡಾಡುವ ಜನರಿಗೆ ತೊಂದರೆಯಾಗುತ್ತಿದೆ. ತಕ್ಷಣ ವಿದ್ಯುತ್ ದೀಪ ಸರಿಪಡಿಸಿ ಎಂದರು.
ಫ್ಲೈಓವರ್ ಮೇಲೆ ಅಳವಡಿಸಲಾಗಿರುವ ವಿದ್ಯುತ್ ದೀಪಗಳನ್ನು ಸರಿಪಡಿಸುವಂತೆ ಎಪಿಎಂಸಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ದೈಹಿಕ ವಿಕಲಚೇತನ ಕ್ರೀಡಾಪಟುಗಳು ಮನವಿ ನೀಡಿ ಪ್ರಸಕ್ತ ಸಾಲಿನ ಮಹಾನಗರ ಪಾಲಿಕೆಯ ಶೇ.5ರ ಅನುದಾನದಲ್ಲಿ ಕ್ರೀಡಾ ಪ್ರೋತ್ಸಾಹ ಧನವನ್ನು ಮೀಸಲಿಡುವಂತೆ ಮನವಿ ನೀಡಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಪಾಲಿಕೆ ಅನುದಾನದಲ್ಲಿ ಪ್ರೋತ್ಸಾಹ ಧನವನ್ನು ಮೀಸಲಿರುಸುವಂತೆ ಶಿಫಾರಸ್ಸು ಮಾಡಲಾಗುವುದೆಂದು ತಿಳಿಸಿದರು.
