ಬೊಮ್ಮಾಯಿ 6 ತಿಂಗಳು ಮಾತ್ರ ಮುಖ್ಯಮಂತ್ರಿ: ಸತೀಶ್ ಜಾರಕಿಹೊಳಿ

ಕೊಪ್ಪಳ: ನನ್ನ ಪ್ರಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರು ತಿಂಗಳ ಸಿಎಂ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳ ಷರತ್ತು ಹಾಕಿಯೇ ಅವರಿಗೆ ಸಿಎಂ ಸ್ಥಾನ ದಯಪಾಲಿಸಲಾಗಿದೆ ಎಂದರು.
ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಈ ಬಾರಿಯೂ ಮೂವರು ಸಿಎಂಗಳಾಗುವುದ ನಿಶ್ಚಿತ ಎಂದ ಜಾರಕಿಹೊಳಿ, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ನಮ್ಮಲ್ಲಿ ಸಿಎಂ ಆಗುವ ಯೋಗ್ಯತೆಯುಳ್ಳ ನಾಲ್ಕೈದು ಮಂದಿ ನಾಯಕರಿದ್ದಾರೆ ಎಂದರು.
ಬಣ ರಾಜಕೀಯ
ಬಣ ರಾಜಕೀಯ ಯಾವುದೇ ಪಕ್ಷಕ್ಕೂ ತಪ್ಪಿದ್ದಲ್ಲ. ಬಿಜೆಪಿಯಲ್ಲೂ ಯಡಿಯೂರಪ್ಪ ಬಣ, ಆರ್ ಎಸ್ ಎಸ್ ಬಣ ಎಂಬುದಿದೆ. ಅದೇ ರೀತಿ ನಮ್ಮ ಪಕ್ಷದಲ್ಲೂ ಗುಂಪುಗಾರಿಕೆ ಇದೆ ಎನ್ನುವ ಮೂಲಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣಗಳಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.
ನಾನು ಸಿಎಂ ರೇಸ್ ನಲ್ಲಿ ಇಲ್ಲ. ಪಕ್ಷ ಕಟ್ಟುವ ರೇಸ್ ನಲ್ಲಿ ಇದ್ದೇನೆ ಎಂದು ಹೇಳಿಕೊಂಡರು. ಸಚಿವ ಶ್ರೀರಾಮುಲು ಅವರ ಡಿಸಿಎಂ ಬೇಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಡಿಸಿಎಂ ಆದರೂ, ಆಗದಿದ್ದರೂ ಕೆಲಸ ಮಾಡಬಹುದು. ವಾಲ್ಮೀಕಿ ಸಮುದಾಯಕ್ಕೆ ಬಿಜೆಪಿ ಅಧಿಕಾರಕ್ಕೇರಿದ 24 ಗಂಟೆಯಲ್ಲಿ 7.5ರಷ್ಟು ಮೀಸಲಾತಿ ನೀಡುವ ವಾಗ್ದಾನ ಮಾಡಿದ್ದರು. 24 ತಿಂಗಳು ಕಳೆದರೂ ಭರವಸೆ ಈಡೇರಿಸಿಲ್ಲ. ಸಮುದಾಯದ ಹೆಸರಲ್ಲಿ ರಾಜಕೀಯ ಮಾಡುವ ಗಿಮಿಕ್ ಇದು ಎಂದು ಮಾರ್ಮಿಕವಾಗಿ ನುಡಿದರು.
