ಉಪ ಚುನಾವಣೆ ಸೋಲು ತಂದ ದಿಗಿಲು; ಯುಪಿಯಲ್ಲಿ ಜನರನ್ನು ಸೆಳೆಯಲು ಬಿಜೆಪಿ ಶತಪ್ರಯತ್ನ

ನವದೆಹಲಿ: ಉಪ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೆಶದಲ್ಲಿನ ಸೋಲು ಮತ್ತು ಗೆದ್ದ ಕಡೆಗಳಲ್ಲಿಯೂ ಗೆಲುವಿನ ಅಂತರ ಕಡಿಮೆಯಿದ್ದುದು ಬಿಜೆಪಿಗೆ ದಿಗಿಲು ತಂದಿಟ್ಟಿದ್ದು, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಅಗ್ನಿಪರೀಕ್ಷೆ ಎದುರಿಸಲು ತಕ್ಷಣದ ಹೊಸ ತಂತ್ರಗಳಿಗೆ ಮೊರೆಹೋಗಿದೆ.
ಉಪ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದಿರುವುದು ಬಿಜೆಪಿಯನ್ನು ಹೆಚ್ಚು ಒತ್ತಡಕ್ಕೆ ಸಿಲುಕಿಸಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಈ ಹಿನ್ನೆಲೆಯಲ್ಲಿ ಅದೀಗ 2022ರ ಉತ್ತರ ಪ್ರದೇಶ ಚುನಾವಣೆ ಪ್ರಯಾಸಕರವಾದೀತು ಎಂಬ ಆತಂಕದಲ್ಲಿದೆ.
ಕೇಂದ್ರ ಸರ್ಕಾರ ಘೋಷಿಸಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತದ ಜೊತೆ ಹೆಚ್ಚುವರಿ ಕಡಿತಕ್ಕೆ ಈಗಾಗಲೇ ಬಿಜೆಪಿ ಆಡಳಿತವಿರುವ ರಾಜ್ಯಗಳು ತೀರ್ಮಾನಿಸಿದ್ದು, ಉತ್ತರ ಪ್ರದೇಶ ಸರ್ಕಾರವೂ ಸೇರಿದೆ. ಇದಲ್ಲದೆ, ರಾಜ್ಯದಲ್ಲಿ ಉಚಿತ ಪಡಿತರ ವಿತರಣೆಯನ್ನು ಮಾರ್ಚ್ವರೆಗೂ ವಿಸ್ತರಿಸಲು ಅದು ಮುಂದಾಗಿದೆ.
ಹಿಮಾಚಲ ಪ್ರದೇಶದಲ್ಲಿನ ಹೀನಾಯ ಸೋಲಿನ ಬಳಿಕ ಬಿಜೆಪಿ, ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಿಸಲು ಹೆಚ್ಚಿನ ಕ್ರಮಗಳಿಗೆ ಮುಂದಾಗುತ್ತಿದೆ ಎನ್ನಲಾಗಿದೆ.
ಬುಧವಾರ ಅಯೋಧ್ಯೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೋವಿಡ್ ಸಮಯದಲ್ಲಿ ಘೋಷಿಸಲಾದ ಕೇಂದ್ರದ ಉಚಿತ ಪಡಿತರ ಯೋಜನೆಯನ್ನು ಹೋಳಿಯವರೆಗೆ ವಿಸ್ತರಿಸುತ್ತಿದೆ ಎಂದು ಹೇಳಿದರು. ಇದು ಲೆಕ್ಕಾಚಾರದ ನಡೆ ಮತ್ತು ಮುಂದಿನ ಚುನಾವಣೆಗೆ ಬಿಜೆಪಿ ಕಾರ್ಯತಂತ್ರದ ಭಾಗವೇ ಆಗಿದೆ ಎಂಬುದನ್ನು ಪಕ್ಷದ ಮೂಲಗಳು ಒಪ್ಪಿಕೊಂಡಿವೆ ಎಂದೇ ಹೇಳಲಾಗುತ್ತಿದೆ.
