ರೂಲ್ಸ್ ಬುಕ್ ಪ್ರಕಾರ ಸದನ ನಡೆದರೆ ಚರ್ಚೆ ಅರ್ಥಪೂರ್ಣ- ಸಿಎಂ ಬೊಮ್ಮಾಯಿ

ಬೆಳಗಾವಿ : ವಿಧಾನಮಂಡಲ ಅಧಿವೇಶನದ ಕಲಾಪದ ಅವಧಿಯನ್ನು ಹೆಚ್ಚಿಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಇದರಿಂದ ಸದನದಲ್ಲಿ ಅರ್ಥಪೂರ್ಣ ಚರ್ಚೆಗೆ ಹೆಚ್ಚಿನ ಸಮಯ ಸಿಗಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬುಧವಾರ ಅವರು, ಸದನ ಮತ್ತಷ್ಟು ಅರ್ಥಪೂರ್ಣವಾಗಿ ನಡೆಯಬೇಕೆನ್ನುವ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸದನದ ಅಧಿವೇಶನದಲ್ಲಿ ನಿಗದಿಪಡಿಸಿರುವ ನಿಯಮಾವಳಿಗಳನ್ನು ಪಾಲಿಸಿದರೆ ಯಾವುದೇ ಸಮಸ್ಯೆ ಬರುವುದಿಲ್ಲ. ಎರಡೂ ಸದನಕ್ಕೆ ಒಂದು ಪರಂಪರೆ ಇದೆ. ವಿಷಯಗಳನ್ನು ಚರ್ಚಿಸಲು ರೀತಿ ನೀತಿ ಇದೆ . ರೂಲ್ಸ್ ಬುಕ್ ಇದೆ. ಅದರಂತೆ ನಾವು ನಡೆದುಕೊಳ್ಳಬೇಕು ಎಂದರು.
ವಿರೋಧಪಕ್ಷಕ್ಕೆ ಸಹಜವಾಗಿ ಹೆಚ್ಚಿನ ಅವಧಿ ದೊರೆಯಬೇಕು. ಆಡಳಿತ ಪಕ್ಷದವರೂ ತಮ್ಮ ಅಭಿಪ್ರಾಯಗಳನ್ನು ಹೇಳಬಹುದು. ಕೆಲವು ವಿಚಾರಗಳಲ್ಲಿ ವಿರೋಧ ಪಕ್ಷಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗುತ್ತದೆ.
ಈ ನೀತಿಯ ಅನುಸಾರ, ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಪಕ್ಷಕ್ಕೆ ವಿಷಯಗಳ ಬಗ್ಗೆ ಚರ್ಚಿಸಲು ಅವಧಿ ನೀಡುವ ವ್ಯವಸ್ಥೆ ಲೋಕಸಭೆಯಲ್ಲಿಯೂ ಇದೆ. ಈ ನೀತಿಯನ್ನು ಇಲ್ಲಿಯೂ ಪಾಲಿಸಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಯಾವುದಾದರು ಸದಸ್ಯರು ಒಂದು ವಿಷಯ ಚರ್ಚೆಗೆ ತೆಗೆದುಕೊಂಡಾಗ, ಉಳಿದ ಸದಸ್ಯರು ಅದೇ ವಿಷಯವಾಗಿ ಮಾತನಾಡಿದಾಗ ಸಮಯದ ಕೊರತೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಕೆಲವು ನೀತಿ ನಿಯಮಗಳನ್ನು ಪುನರ್ ಪರಿಶೀಲನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
