Shivamogga: ಹರ್ಷ ಕೊಲೆ ಬಳಿಕ ಹಿಂಸಾಚಾರ ಹಿನ್ನೆಲೆ : ಶಿವಮೊಗ್ಗದಲ್ಲಿ ಡ್ರೋನ್ ಕಣ್ಗಾವಲು

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ನಂತರ, ಶಿವಮೊಗ್ಗದಲ್ಲಿ ನಿರ್ಮಾಣ ಆಗಿರುವ ಪ್ರಕ್ಷುಬ್ದ ವಾತಾವರಣತಿಳಿಗೊಳಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವ್ಯಾಪಕ ಕ್ರಮ ಕೈಗೊಂಡಿದೆ. ಕರ್ಫ್ಯೂ ಸಹ ಮುಂದುವರಿಸಲಾಗಿದೆ. ಈ ನಡುವೆ ಪರಿಣಾಮವಾಗಿ ಪ್ರಸ್ತುತ ಶಾಂತಿ ಸ್ಥಿತಿಗೆ ನಗರ ಮರಳುತ್ತಿದೆ. ಈ ನಡುವೆ ಕಿಡಿಗೇಡಿಗಳ ದುಷ್ಕೃತ್ಯ ಪತ್ತೆ ಹಚ್ಚಲು ಡ್ರೋನ್ ಕ್ಯಾಮರಾಗಳ ಬಳಕೆಗೆ ಪೊಲೀಸ್ ಇಲಾಖೆ ಮುಂದಾಗಿದೆ.
ಇದಕ್ಕಾಗಿ ಕಾರ್ಕಳದ ಎಎನ್ಎಫ್ (ನಕ್ಸಲ್ ನಿಗ್ರಹ ದಳ) ಪಡೆಯ ನಾಲ್ಕು ತಂಡಗಳು 7 ಡ್ರೋಣ್ ಕ್ಯಾಮರಾಗಳೊಂದಿಗೆ ಶಿವಮೊಗ್ಗ ನಗರಕ್ಕೆ ಆಗಮಿಸಿದೆ. ನಗರದ ಬಸ್ ನಿಲ್ದಾಣ ಸಮೀಪದ ಅಶೋಕ ಸರ್ಕಲ್ ಬಳಿ ಡ್ರೋಣ್ ತಂಡದ ಪ್ರಾತ್ಯಾಕ್ಷಿಕೆ ನಡೆಯಿತು.
500 ಮೀಟರ್ ಮೇಲ್ಭಾಗದಿಂದ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿನ ದೃಶ್ಯಾವಳಿ ಸಂಗ್ರಹಿಸುವ ಸಾಮರ್ಥ್ಯ ಈ ಡ್ರೋನ್ ಕ್ಯಾಮರಾಗಳಿಗಿದೆ. ಕಿಡಿಗೇಡಿಗಳ ದುಷ್ಕೃತ್ಯ ಪತ್ತೆಗೆ ಈ ಕ್ಯಾಮರಾಗಳೂ ಸಾಕಷ್ಟು ಸಹಕಾರಿ ಆಗಲಿದೆ ಎಂಬುವುದು ಪೊಲೀಸರ ಅಭಿಪ್ರಾಯವಾಗಿದೆ.
ಹರ್ಷ ತಂದೆ, ತಾಯಿ ಆರೋಗ್ಯದಲ್ಲಿ ಏರುಪೇರು!
ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷರ ತಂದೆ ನಾಗರಾಜ್ ಹಾಗೂ ತಾಯಿ ಪದ್ಮಾ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ತಂಡ, ಸೀಗೆಹಟ್ಟಿಯಲ್ಲಿರುವ ಹರ್ಷ ನಿವಾಸಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ. ಊಟ, ನಿದ್ರೆಯಿಲ್ಲದ ಕಾರಣದಿಂದ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗಿದೆ. ಸಮರ್ಪಕವಾಗಿ ಊಟ ಹಾಗೂ ನಿದ್ರೆ ಮಾಡುವಂತೆ ಸಲಹೆ ನೀಡಲಾಗಿದೆ ಎಂದು ಚಿಕಿತ್ಸೆ ನೀಡಿದ ವೈದ್ಯ ತೇಜಸ್ವಿ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿಗಳ ವಿರುದ್ದ ಪೊಲೀಸರು ಕೈಗೊಂಡ ಕ್ರಮಗಳ ತನಿಖೆಗೆ ಗೃಹ ಸಚಿವರ ಆದೇಶ:
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ ಬಂಧಿಸಲಾಗಿರುವ ಆರೋಪಿಗಳಲ್ಲಿ, ಕೆಲವರು ಈ ಹಿಂದೆ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗಿದ್ದ ವರದಿಗಳಿವೆ. ಕಳೆದ 5 ವರ್ಷಗಳ ಅವಧಿಯಲ್ಲಿ ಇವರ ವಿರುದ್ದ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಯಾವೆಲ್ಲ ಕ್ರಮ ಕೈಗೊಳ್ಳಲಾಗಿತ್ತು ಎಂಬ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ
ರಾಜ್ಯ ಪೊಲೀಸ್ ಇಲಾಖೆ ಆದೇಶಿಸಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆ ಮಹಾ ನಿರ್ದೇಶಕರಿಗೆ ಸಚಿವರು ಪತ್ರ ಬರೆದಿದ್ದಾರೆ. ವಿಸ್ತೃತ ತನಿಖೆ ನಡೆಸಬೇಕು. ಒಂದು ವಾರದೊಳಗೆ ಸಮಗ್ರ ತನಿಖಾ ವರದಿ ಸಲ್ಲಿಸಬೇಕು ಎಂದು ಗೃಹ ಸಚಿವರು ಸೂಚಿಸಿದ್ದಾರೆ.
ಕೆಲ ಆರೋಪಿಗಳ ವಿರುದ್ದ ಕೋಟೆ ಹಾಗೂ ದೊಡ್ಡಪೇಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದ ಮಾಹಿತಿಯಿದೆ. ಕ್ರಿಮಿನಲ್ ಹಿನ್ನಲೆಯುಳ್ಳ ಈ ಆರೋಪಿಗಳ ವಿರುದ್ದ, ಕಳೆದ 5 ವರ್ಷಗಳಿಂದ ಸದರಿ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ, ಸಿಬ್ಬಂದಿ ಯಾವೆಲ್ಲಾ ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಕರ್ತವ್ಯ ನಿರ್ವಹಣೆಯಲ್ಲಿನ ಲೋಪಗಳು ಹಾಗೂ ಮೇಲಾಧಿಕಾರಿಗಳು ನೀಡಿರುವ ನಿರ್ದೇಶನಗಳನ್ನು ಸಮರ್ಪಕವಾಗಿ ಪಾಲನೆಯಾಗಿದೆಯೇ ಎಂಬುವುದರ ಬಗ್ಗೆ ವರದಿ ನೀಡುವಂತೆ ಪೊಲೀಸ್ ಇಲಾಖೆ ಮಹಾ ನಿರ್ದೇಶಕರಿಗೆ ಸಚಿವರು ಸೂಚಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸಮಾಜಘಾತುಕ ಶಕ್ತಿಗಳ ಬೆಳವಣಿಗೆಯಲ್ಲಿ ಪೊಲೀಸರ ಪಾತ್ರದ ಕುರಿತಂತೆ ವ್ಯಾಪಕ ದೂರುಗಳು ಸಾರ್ವಜನಿಕ ವಲಯದಿಂದ ಬರುತ್ತಿವೆ.
ಈ ಕುರಿತಂತೆ ತನಿಖೆ ನಡೆಸಿ, ಒಂದು ವಾರದಲ್ಲಿ ವಿಸ್ತೃತ ವರದಿ ನೀಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯ ಪೊಲೀಸ್ ಇಲಾಖೆ ಮಹಾ ನಿರ್ದೇಶಕರಿಗೆ ಬುಧವಾರ ಪತ್ರ ಬರೆದಿದ್ದಾರೆ. ಗೃಹ ಸಚಿವರ ಈ ಪತ್ರವು ಸಹಜವಾಗಿಯೇ, ಸಮಾಜಘಾತುಕ ಶಕ್ತಿಗಳ ಜೊತೆ ನಂಟು ಹೊಂದಿರುವ ಪೊಲೀಸರಲ್ಲಿ ನಡುಕ ಹುಟ್ಟುವಂತೆ ಮಾಡಿದೆ.
ನಿಲ್ಲದ ಕಿಡಿಗೇಡಿಗಳ ದುಷ್ಕೃತ್ಯ : ಮನೆ ಮುಂಭಾಗ ನಿಲ್ಲಿಸಿದ್ದ ಎರಡು ಬೈಕ್’ಗೆ ಬೆಂಕಿ !
ಬಿಗಿ ಪೊಲೀಸ್ ಪಹರೆಯ ನಡುವೆಯೂ, ಶಿವಮೊಗ್ಗ ನಗರದಲ್ಲಿ ಕಿಡಿಗೇಡಿಗಳು ತಮ್ಮ ದುಷ್ಕೃತ್ಯ ಮುಂದುವರೆದಿದೆ. ಶಿವಮೊಗ್ಗ ನಗರದ ಆರ್.ಎಂ.ಎಲ್ ನಗರ ಬಡಾವಣೆ ಎರಡನೇ ಹಂತ 6 ನೇ ತಿರುವಿನ, ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದ ಎಂದು ತಿಳಿದು ಬಂದಿದೆ. ಮಂಗಳವಾರ ಕೂಡ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಮನೆ ಮುಂಭಾಗ ನಿಲ್ಲಿಸಿದ್ದ ಎರಡು ಬೈಕ್ ಗಳು ಹಾಗೂ ಒಂದು ಆಟೋಗೆ ಬೆಂಕಿ ಹಚ್ಚಲಾಗಿತ್ತು.
