ಬೆಲೆ ಏರಿಕೆ ಖಂಡಿಸಿ ಆಟೋ ಮಾಲೀಕರಿಂದ ಪ್ರತಿಭಟನೆ

ಧಾರವಾಡ: ಪೆಟ್ರೋಲ್, ಆಟೋ ಎಲ್‌ಪಿಜಿ ಹಾಗೂ ಸಿಎನ್‌ಜಿ ಬೆಲೆ ಏರಿಕೆ ಮಾಡುತ್ತಿರುವ ಸರ್ಕಾರಗಳ ನಡೆಯನ್ನು ಖಂಡಿಸಿ ಹಾಗೂ ಬೆಲೆಗಳ ಇಳಿಕೆ ಅಗ್ರಹಿಸಿ, ಧಾರವಾಡದಲ್ಲಿ ಆಟೋ ಚಾಲಕರು ಹಾಗೂ ಮಾಲೀಕರು ಬೀದಿಗೆ ಇಳಿದು ಪ್ರತಿಭಟನೆ ಮೆರವಣಿಗೆ ನಡೆಸಿ ತಮ್ಮ ಅಕ್ರೋಶ ಹೊರಹಾಕಿದರು.
ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ನೇತೃತ್ವದಲ್ಲಿ, ನಗರದ ಕೋರ್ಟ್ ವೃತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೇರವಣಿಗೆ ನಡೆಸಿದ ಆಟೋ ಚಾಲಕರು ಹಾಗೂ ಮಾಲೀಕರು ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಆಟೋ ಚಾಲಕರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಇದರ ಮಧ್ಯೆ ಈಗ ತಿಂಗಳಿಗೆ ಎರಡ್ಮೂರು ಬಾರಿ ಪದೇ ಪದೇ ಪೆಟ್ರೋಲ್, ಆಟೋ ಎಲ್ ಪಿ ಜಿ ಹಾಗೂ ಸಿ ಎನ್ ಜಿ ಬೆಲೆ ಏರಿಕೆಯಾಗುತ್ತಲೇ ಸಾಗುತ್ತಿವೆ. ಕೇಂದ್ರ, ರಾಜ್ಯ ಸರ್ಕಾರಗಳು ಅಧಿಕಾರಕ್ಕೆ ಬಂದಾಗಿನಿಂದಲೂ ಬೆಲೆ ಏರಿಕೆಯ ಅನ್ನುವುದು ಮಾಮೂಲಿ ಆಗಿ ಬಿಟ್ಟಿದೆ. ಇದು ಬಡ ಆಟೋ ರಿಕ್ಷಾ ಚಾಲಕರ ಹಾಗೂ ಮಾಲೀಕರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಜೀವನ ಸಾಗಿಸುವುದು ಹೇಗೆ ಎಂಬ ಪ್ರಶ್ನೆಯ ನಮ್ಮಲ್ಲಿ ಹುಟ್ಟು ಹಾಕುವುದರ ಜೊತೆಗೆ ಆತಂಕ ಮೂಡುಸುತ್ತಿದೆ. ಹಾಗಾಗಿ ಈ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನ ಬೆಲೆಗಳ ಇಳಿಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
