ಏಷ್ಯನ್ ಚಾಂಪಿಯನ್ಷಿಪ್ ಟ್ರೋಫಿ: ಸಹಾಯಕ ಕೋಚ್ ಆಗಿ ಕೊಡಗಿನ ಅಂಕಿತಾ ಸುರೇಶ್ ಆಯ್ಕೆ

ಕೊಡಗು: ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಈ ತಿಂಗಳಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ ಷಿಪ್ ಟ್ರೋಫಿ ಮಹಿಳಾ ಹಾಕಿ ಪಂದ್ಯಾವಳಿಯ ಭಾರತ ತಂಡದ ಸಹಾಯಕ ಕೋಚ್ ಆಗಿ ಕೊಡಗು ಜಿಲ್ಲೆ ಕಂಬಿಬಾಣೆಯ ಅಂಕಿತಾ ಸುರೇಶ್ ಆವರು ಕಾರ್ಯ ನಿರ್ವಹಿಸಲಿದ್ದಾರೆ. ಇವರು ಸಹಾಯಕ ಕೋಚ್ ಜವಾಬ್ದಾರಿಯೊಂದಿಗೆ ತಂಡದ ಮ್ಯಾನೇಜರ್ ಆಗಿ ಕೂಡ ಉಸ್ತುವಾರಿ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಟೋಕಿಯೋ ಒಲಂಪಿಕ್ಸ್ ನಂತರ ಭಾರತ ಸೀನಿಯರ್ ಮಹಿಳಾ ಹಾಕಿ ತಂಡವು ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ಅಂತರಾಷ್ಟ್ರೀಯ ಪಂದ್ಯಾವಳಿ ಇದಾಗಿದೆ. ಡಿಸೆಂಬರ್ 5 ರಿಂದ 12 ರ ವರೆಗೆ ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಏರ್ಪಟ್ಟಿರುವ ಏಷ್ಯನ್ ಚಾಂಪಿಯನ್ ಷಿಪ್ ಟ್ರೋಫಿಯ ಹಣಾಹಣಿಯಲ್ಲಿ ಭಾರತ ಮಹಿಳಾ ತಂಡವು ಹಾಕಿ ಕ್ರೀಡೆಯ ಚಾಕಚಕ್ಯತೆಯನ್ನು ಪ್ರದರ್ಶಿಸಲಿದೆ.
ಈಗಾಗಲೇ ಭಾರತ ಮಹಿಳಾ ಹಾಕಿ ತಂಡವು ಸಿಯೋಲ್ ಗೆ ತಲುಪಿದೆ. ಹಾಕಿ ಕ್ಷೇತ್ರದಲ್ಲಿ ರಾಷ್ಟ್ರದ ಚಿತ್ತವನ್ನು ಕೊಡಗಿನತ್ತ ಹರಿಸುವಂತೆ ಮಾಡಿರುವ ಸಹಾಯಕ ಕೋಚ್ ಅಂಕಿತಾ ಸುರೇಶ್ ಅವರು ಉದ್ಯಮಿ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿಯಾಗಿದ್ದಾರೆ.
