
ಬೆಳಗಾವಿ: ಬೆಳಗಾವಿ ಗಡಿ ವಿವಾದವನ್ನು ಕಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮತ್ತೆ ಮುಂಚಣಿಗೆ ತರುವ ಯತ್ನ ಮಾಡುತ್ತಿದ್ದಾರೆ. ಗಡಿ ವಿವಾದ ಕುರಿತು ಎಂಇಎಸ್ ಪುಂಡರು ಈ ಹಿಂದೆ ಪ್ರಧಾನಿಗೆ ಪತ್ರ ಅಭಿಯಾನ ಬೆನ್ನಲ್ಲೇ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಕೂಡ ಇವರಿಗೆ ಕುಮ್ಮಕ್ಕು ನೀಡಲೆಂದೇ ಪ್ರಧಾನಮಂತ್ರಿ ಮೋದಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಮಹಾರಾಷ್ಟ್ರದ ಗಡಿ ವಿವಾದವನ್ನ ಇತ್ಯರ್ಥ ಪಡಿಸಬೇಕು. ಗಡಿ ವಿವಾದ ಇತ್ಯರ್ಥಕ್ಕೆ ಪ್ರಧಾನಮಂತ್ರಿ ಮೋದಿ ಮಧ್ಯಪ್ರವೇಶಿಸುವಂತೆ ಆಗಸ್ಟ್ 9ರಂದು ಪವಾರ್ ಪತ್ರ ಬರೆದಿದ್ದಾರೆ. ಮುಂಬೈ ರಾಜಧಾನಿಯಾಗಿ ಮಹಾರಾಷ್ಟ್ರ ರಾಜ್ಯ ರಚನೆಯಾಗಿ 60 ವರ್ಷ ಕಳೆದಿದೆ. ಕರ್ನಾಟಕದಲ್ಲಿ ಮರಾಠಿಯ ಭಾಷಿಕ ಪ್ರದೇಶಗಳು ಮಹಾರಾಷ್ಟ್ರ ಸೇರಿಲ್ಲ. ಹೀಗಾಗಿ ಸಂಯುಕ್ತ ಮಹಾರಾಷ್ಟ್ರ ರಚನೆ ಕನಸು ಇನ್ನೂ ಈಡೇರಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಂಯುಕ್ತ ಮಹಾರಾಷ್ಟ್ರ ರಚನೆ ಆಗುವತನಕ ಮಹಾರಾಷ್ಟ್ರ ವಿಶ್ರಮಿಸುವುದಿಲ್ಲ. ಕರ್ನಾಟಕದಲ್ಲಿ ಇರುವ ಮರಾಠಿ ಭಾಷಿಕರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ.
