
ನವದೆಹಲಿ: ಟಾಟಾ ಗ್ರೂಪ್ ಚಾಲಿತ ಏರ್ ಲೈನ್ ಕಂಪನಿ ಏರ್ ಇಂಡಿಯಾ ಈ ತಿಂಗಳಾಂತ್ಯದಲ್ಲಿ ಭಾರತ ಮತ್ತು ಉಕ್ರೇನ್ ನಡುವೆ ಮೂರು ವಿಮಾನಗಳನ್ನು ನಿರ್ವಹಿಸುವುದಾಗಿ ಘೋಷಿಸಿದೆ. ಈ ತಿಂಗಳ 22, 24 ಮತ್ತು 26ರಂದು ಭಾರತ ಮತ್ತು ಉಕ್ರೇನ್ ನಡುವೆ ಮೂರು ವಿಮಾನಗಳನ್ನು ನಿರ್ವಹಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಈ ವಿಮಾನಗಳಲ್ಲಿ ಆಸನಗಳು ಲಭ್ಯವಿದ್ದು, ಏರ್ ಇಂಡಿಯಾ ಬುಕಿಂಗ್ ಕಚೇರಿಗಳು, ವೆಬ್ ಸೈಟ್, ಕಾಲ್ ಸೆಂಟರ್ ಮತ್ತು ಅಧಿಕೃತ ಟ್ರಾವೆಲ್ ಏಜೆಂಟ್ ಗಳ ಮೂಲಕ ಬುಕಿಂಗ್ ತೆರೆದಿರುತ್ತದೆ.
ಈ ಹಿಂದೆ, ಉಕ್ರೇನ್ ಮತ್ತು ರಷ್ಯಾ ನಡುವೆ ಚಾಲ್ತಿಯಲ್ಲಿರುವ ಉದ್ವಿಗ್ನತೆಯ ದೃಷ್ಟಿಯಿಂದ, ಉಕ್ರೀನ್ ನಲ್ಲಿರುವ ಭಾರತದ ರಾಯಭಾರ ಕಚೇರಿ, ವಿದ್ಯಾರ್ಥಿಗಳಿಗೆ ಭಯಭೀತರಾಗಬೇಡಿ ಆದರೆ ಭಾರತಕ್ಕೆ ಪ್ರಯಾಣಿಸಲು ಲಭ್ಯವಿರುವ ಮತ್ತು ಅನುಕೂಲಕ ವಿಮಾನಗಳನ್ನು ಕಾಯ್ದಿರಿಸುವಂತೆ ಸಲಹೆ ನೀಡಿತ್ತು.
ಏರ್ ಇಂಡಿಯಾ ಮತ್ತು ಉಕ್ರೇನಿಯನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ಸೇರಿದಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ವಿಮಾನಗಳನ್ನು ಯೋಜಿಸಲಾಗುತ್ತಿದೆ ಎಂದ ಅದು ಹೇಳಿದೆ.
