ನಿರ್ಮಾಪಕನ ವಿರುದ್ಧ ರಸ್ತೆಯಲ್ಲೇ ಬೆತ್ತಲೆ ಪ್ರತಿಭಟನೆ ಮಾಡಿದ ನಟಿ!

ಹೈದರಾಬಾದ್: ತನಗೆ ನಿರ್ಮಾಪಕ ಬನ್ನಿ ವಾಸು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ತೆಲುಗು ನಟಿ ಸುನೀತಾ ಬೋಯಾ ಅವರು ಪ್ರಸಿದ್ಧ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್‌ನ ಕಚೇರಿಯ ಎದುರು ಗುರುವಾರ ರಾತ್ರಿ ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
ಸುನೀತಾ ಅವರು ಬನ್ನಿ ವಾಸು ನಿರ್ಮಾಣದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ನನಗೆ ನಿರ್ಮಾಪಕರು ಸರಿಯಾಗಿ ಸಂಭಾವನೆ ನೀಡಿಲ್ಲ. ಅದರಿಂದಾಗಿ ನಾನು ಅರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದೇನೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಈ ಬಗ್ಗೆ ಹಲವಾರು ಜನರಿಗೆ ಮನವಿ ಮಾಡಿದರೂ ನನ್ನ ಸಮಸ್ಯೆ ಪರಿಹರಿಸಲು ಯಾರೂ ಮುಂದಾಗಲಿಲ್ಲ. ಹಾಗಾಗಿ ನಾನು ಬೆತ್ತಲೆ ಪ್ರತಿಭಟನೆ ಮಾಡಿ ಜನರ ಗಮನ ಸೆಳೆದು ನನ್ನ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬೇಕಾಯಿತು” ಎಂದು ಸುನೀತಾ ಬೋಯಾ ಹೇಳಿದ್ದಾರೆ.
ಬೆತ್ತಲೆ ಪ್ರತಿಭಟನೆ ಬಗ್ಗೆ ಗೀತಾ ಆರ್ಟ್ಸ್ ಸಂಸ್ಥೆಯ ಕಚೇರಿ ಭದ್ರತಾ ಸಿಬ್ಬಂದಿಯವರು ಪೊಲೀಸರಿಗೆ ದೂರು ನೀಡಿದ ಬಳಿಕ, ಪೊಲೀಸರು ಆಗಮಿಸಿ ಸುನೀತಾ ಬೋಯಾ ಅವರ ಮೈಮೇಲೆ ಬಟ್ಟೆ ಹೊದಿಸಿದ್ದಲ್ಲದೆ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಹಿಂದೆಯೂ ಒಮ್ಮೆ ಸುನೀತಾ ಅವರು ಬನ್ನಿ ವಾಸು ವಿರುದ್ಧ ಪ್ರತಿಭಟನೆ ಮಾಡಿದ್ದರು. ಆಗ ವಿಷಯ ನ್ಯಾಯಾಲಯಕ್ಕೂ ಹೋಗಿತ್ತು. ಅಲ್ಲಿ ಇತ್ಯರ್ಥವಾಗಿತ್ತು. ಬನ್ನಿ ವಾಸು ತೆಲುಗಿನಲ್ಲಿ ಪ್ರಸಿದ್ಧ ನಿರ್ಮಾಪಕರಾಗಿದ್ದು, ‘ಗೀತ ಗೋವಿಂದಂ’, ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’, ‘ಹಂಡ್ರೆಡ್ ಪರ್ಸೆಂಟ್ ಲವ್’, ‘ಸರೈನೋಡು’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ನಟಿಯ ಆರೋಪದ ಬಗ್ಗೆ ಬನ್ನಿ ವಾಸು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
