ಮಹಿಳಾ ಅಭಿಮಾನಿಯ ಕಾಲಿಗೆ ಬಿದ್ದ ನಟ ರಿತೇಶ್ ದೇಶ್ಮುಖ್!

ಮುಂಬೈ: ತುಂಬಾ ವರ್ಷಗಳ ಬಳಿಕ ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಮತ್ತು ಪತ್ನಿ ಜೆನಿಲಿಯಾ ಡಿಸೋಜಾ ಅವರು ಹೊಸ ಸಿನಿಮಾವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಹೆಸರು ‘ವೇದ್’. ಇದನ್ನು ಮರಾಠಿ ಭಾಷೆಯಲ್ಲಿ ರಿತೇಶ್ ಅವರೇ ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾ ತೆಲುಗಿನ ಮಜಿಲಿ ಚಿತ್ರದ ರಿಮೇಕ್ ಆಗಿದ್ದು, ಡಿಸೆಂಬರ್ 30ಕ್ಕೆ ತೆರೆಗೆ ಅಪ್ಪಳಿಸಲಿದೆ.
ರಿತೇಶ್ ಇತ್ತೀಚೆಗಷ್ಟೇ ಸಿನಿಮಾ ಪ್ರಚಾರವನ್ನು ಆರಂಭಿಸಿದ್ದು, ಅದರ ಭಾಗವಾಗಿ ಮಹಾರಾಷ್ಟ್ರದ ಕಾಲೇಜು ಒಂದಕ್ಕೆ ಭೇಟಿ ನೀಡಿದ್ದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ತಮ್ಮ ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಮಹಿಳಾ ಅಭಿಮಾನಿಯೊಬ್ಬಳು ಜೊತೆಯಲ್ಲಿ ಡಾನ್ಸ್ ಮಾಡುವ ಬಯಕೆಯನ್ನು ರಿತೇಶ್ ಬಳಿ ಹೇಳಿಕೊಂಡರು. ರಿತೇಶ್ ಓಕೆ ಎಂದ ಬಳಿಕ ವೇದಿಕೆಯಲ್ಲೇ ಒಟ್ಟಾಗಿ ಡಾನ್ಸ್ ಮಾಡುವ ಮೂಲಕ ಅಭಿಮಾನಿಯ ಆಸೆ ತೀರಿಸಿದರು.
ಡಾನ್ಸ್ ಬಳಿಕ ತುಂಬಾ ಭಾವುಕಳಾದ ಅಭಿಮಾನಿ ರಿತೇಶ್ ಕಾಲಿಗೆ ಬಿದ್ದಳು. ಆಕೆಯನ್ನು ಮೇಲೆತ್ತಿದ್ದ ರಿತೇಶ್, ತಾವೂ ಸಹ ಅಭಿಮಾನಿಯ ಕಾಲಿಗೆ ಬಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ನೆಟ್ಟಿಗರು ರಿತೇಶ್ ಅವರನ್ನು ಮನಸಾರೆ ಹೊಗಳುತ್ತಿದ್ದಾರೆ.
