ಪುನೀತ್ ರನ್ನ ಹುಡುಕಿಕೊಂಡು ಹೋಗುತ್ತೇನೆ ಎಂದ ರಾಘಣ್ಣ: ತಬ್ಬಿ ಸಮಾಧಾನ ಮಾಡಿದ ಶಿವಣ್ಣ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾದ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿದೆ. ಚಿತ್ರದ ರಿಲೀಸ್ ಸಂದರ್ಭದಲ್ಲಿ ಚಿತ್ರತಂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ನಟ ರಾಘವೇಂದ್ರ ರಾಜ್ ಕುಮಾರ್ ಭಾವುಕರಾಗಿ ನೋವಿನ ಮಾತುಗಳನ್ನಾಡಿದ್ದಾರೆ.
ಜೇಮ್ಸ್ ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮಕ್ಕೆ ಡಾ.ರಾಜ್ ಕುಟುಂಬದ ಸಾಕಷ್ಟು ಮಂದಿ ಭಾಗಿಯಾಗಿದ್ರು. ಈ ವೇಳೆ ವೇದಿಕೆಯೇರಿದ ರಾಘಣ್ಣ “ಎಮೋಶನಲ್ ಆಗಬಾರದು ಎಂದು ಅಂದುಕೊಳ್ಳುತ್ತೇನೆ. ಆದರೆ ಹಾಗೆಯೇ ಆಗುತ್ತದೆ” ಎಂದರು. ಪುನೀತ್ ನಿಧನದ ಬಗ್ಗೆ ಮಾತನಾಡಿ ಭಾವುಕರಾದ ರಾಘವೇಂದ್ರ ರಾಜ್ ಕುಮಾರ್ “ಚೆನ್ನಾಗಿ ಓಡುತಿದ್ದ ಗಾಡಿ ನಿಲ್ಲಿಸಿದ್ಯಾಕೆ? ನಂಗೆ ಹಾರ್ಟ್ ಅಟ್ಯಾಕ್ ಆಗಿತ್ತು, ಸ್ಟ್ರೋಕ್ ಆಗಿತ್ತು. ಆದರೂ ಇದ್ದೇನೆ. ಇನ್ನು ಮುಂದೆ ಆಗುವುದಿಲ್ಲ. ಅವನನ್ನು ಹುಡುಕಿಕೊಂಡು ಹೋಗುತ್ತೇನೆ” ಎಂದು ಭಾವುಕರಾದರು. ರಾಘಣ್ಣನ ಮಾತುಗಳನ್ನ ಕೇಳಿ ನಟ ಶಿವರಾಜ್ ಕುಮಾರ್ ಕಣ್ಣೀರು ಹಾಕಿದರು.
ರಾಘವೇಂದ್ರ ರಾಜ್ ಕುಮಾರ್ ಮಾತು ಕೇಳಿ ಕಣ್ಣೀರು ಹಾಕಿದ ಶಿವಣ್ಣ ಬಳಿಕ ವೇದಿಕೆ ಮೇಲೆ ಬಂದ ಸಮಾಧಾನ ಮಾಡಿದರು. ಸಹೋದರರು ತಬ್ಬಿಕೊಂಡು ಕಣ್ಣೀರು ಹಾಕುತ್ತಿದ್ದಂತೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾಕಷ್ಟು ಮಂದಿಯ ಕಣ್ಣಾಲಿಗಳು ತುಂಬಿ ಬಂದವು.
ಬಳಿಕ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ “ಭಾವಕನಾಗಿ ಹೀಗೆ ಹೇಳಿದೆ. ನಿಮ್ಮೆಲ್ಲರನ್ನ ಬಿಟ್ಟು ನಾನೆಲ್ಲಿ ಹೋಗಲಿ. ಇಲ್ಲೇ ಇರುತ್ತೇನೆ” ಎಂದರು
