ದಾಳಿಗೆ ಬಂದ ಎಸಿಬಿ ಅಧಿಕಾರಿಗಳು ಮನೆ ಬಾಗಿಲಲ್ಲೇ ನಿಂತರು!

ಧಾರವಾಡ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಬೇಟೆಗೆ ಇಳಿದಿದ್ದು, ಧಾರವಾಡದಲ್ಲಿಯು ಕೂಡಾ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಧಾರವಾಡ ನೀರಾವರಿ ನಿಗಮದ ಎಇಇ ಅಧಿಕಾರಿಯ ಮನೆಯ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಆದರೆ ಮನೆ ಲಾಕ್ ಆಗಿದ್ದರಿಂದ ಕಳೆದ ಎರಡು ಗಂಟೆಗೂ ಹೆಚ್ಚು ಕಾಲ ಮುಂಭಾಗದಲ್ಲಿ ಅಧಿಕಾರಿಗಳು ಕಾದು ಕುಳಿತಿದ್ದು, ಸಂಬಂಧಿಗಳನ್ನು ಕರೆಸಿಕೊಂಡು ಮನೆಯ ಲಾಕ್ ಓಪನ್ ಮಾಡಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಧಾರವಾಡ ಸನ್ಮತಿ ನಗರದಲ್ಲಿರುವ ನೀರಾವರಿ ನಿಗಮದ ಎಇಇ ಬಸವರಾಜ ಪಾಟೀಲ ಎನ್ನುವವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯಾದಗಿರಿಯಿಂದ ಬಂದಿರುವ ಎಸಿಬಿ ಅಧಿಕಾರಿಗಳ ತಂಡ ಈಗ ಮನೆಯ ಲಾಕ್ ಓಪನ್ ಮಾಡಿಸಲು ಪ್ರಯತ್ನ ನಡೆಸುತ್ತಿದೆ.
ನೀರಾವರಿ ನಿಗಮ ಎಇಇ ಬಸವರಾಜ ಪಾಟೀಲ್ ಅವರು ಸದ್ಯ ಬೆಂಗಳೂರಿನಲ್ಲಿದ್ದು, ಮನೆಯಲ್ಲಿ ಯಾರೂ ಇಲ್ಲದೇ ಇರುವುದರಿಂದ ಎಸಿಬಿ ಅಧಿಕಾರಿಗಳು ಹೊರಗಡೆ ಕಾಯುತ್ತಿದ್ದಾರೆ. ಬಸವರಾಜ ಅವರು ಬೆಂಗಳೂರಿನಲ್ಲಿದ್ದು, ಅವರು ಅಲ್ಲಿಂದ ಬಂದ ನಂತರವೇ ಬಾಗಿಲು ತೆರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
