ಬೆಂಗಳೂರಿನಲ್ಲಿ ಇಂದಿನಿಂದ ಎರಡು ವಾರ ಆನ್ ಲೈನ್ ತರಗತಿ, ಜ.6ರಿಂದ ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ: ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ

ಬೆಂಗಳೂರು: ಬೆಂಗಳೂರಿನಲ್ಲಿ ಇದೇ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ 5ರವರೆಗೆ ಎರಡು ವಾರ ವಾರಾಂತ್ಯದ ಕರ್ಫ್ಯೂ ಹಾಗೂ ಇಂದಿನಿಂದ ಮೆಡಿಕಲ್ ಮತ್ತು ಪ್ಯಾರ ಮೆಡಿಕಲ್, 10,11 ಮತ್ತು 12ನೇ ತರಗತಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತರಗತಿಗಳನ್ನು ಶಾಲೆ-ಕಾಲೇಜುಗಳ ಬದಲಾಗಿ ಆನ್ ಲೈನ್ ನಲ್ಲಿ ನಡೆಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಮುಖ್ಯಮಂತ್ರಿ ಅವರ ಗೃಹ ಕಚೇರಿಯಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ನಡೆದ ಉನ್ನತಮಟ್ಟದ ಸುದೀರ್ಘ ಸಭೆ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜಂಟಿ ಸುದ್ದಿಗೋಷ್ಠಿಯಲ್ಲಿ ಹೊಸ ಮಾರ್ಗಸೂಚಿ ಅನ್ವಯ ನಾಳೆಯಿಂದಲೇ ಕೋವಿಡ್ ಹೊಸ ನಿಯಮಗಳು ಜಾರಿಯಾಗಲಿವೆ ಎಂದರು.
ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುವುದು. ವಾರಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಆಹಾರ ಪದಾರ್ಥ, ಹೊಟೆಲ್ಗಳಲ್ಲಿ ಪಾರ್ಸೆಲ್, ಅಗತ್ಯ ಸೇವೆಗಳು ಮಾತ್ರ ಇರುತ್ತವೆ ಎಂದರು.
ಚಿತ್ರಮಂದಿರ, ಮಾಲ್, ಬಾರ್, ಪಬ್ಗಳಲ್ಲಿ ಕೋವಿಡ್ ನಿಯಮಾವಳಿಗೆ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಪಡೆದಿರುವವರಿಗೆ ಅವುಗಳ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಪ್ರವೇಶ ಅವಕಾಶವಕಾಶ ಇರುತ್ತದೆ.
ಮದುವೆ ಹೊರಾಂಗಣದಲ್ಲಿದ್ದರೆ 200 ಮಂದಿ, ಒಳಾಂಗಣದಲ್ಲಿದ್ದರೆ 100 ಜನರಿಗೆ ಮಾತ್ರ ಅವಕಾಶ. ಅವರೂ ಕೂಡ ಕೋವಿಡ್ ಎರಡೂ ಡೋಸ್ ಲಸಿಕೆ ಪಡೆದಿರಬೇಕು, ಧಾರ್ಮಿಕ ಸ್ಥಳಗಳು ನಿಬಂಧನೆಗೊಳಪಟ್ಟಿರುತ್ತವೆ ಎಂದು ಅವರು ಸ್ಪಷ್ಟಪಡಿಸಿದರು.
ಮೇಕೆದಾಟು ಪಾದಯಾತ್ರೆಗೆ ಸಂಚಕಾರ
ಪ್ರತಿಭಟನೆ, ಜಾತ್ರೆ, ಸಾರ್ವಜನಿಕ ಸಮಾರಂಭಗಳನ್ನು ನಡೆಸುವಂತಿಲ್ಲ. ಜ.6ರಿಂದ ಈ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ. ರಾಜ್ಯದ ಜನರ ಪ್ರಾಣ ರಕ್ಷಣೆ ನಮ್ಮ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಮಾಡಿದೆ ಎಂದರು. ಈ ಮೂಲಕ ಕಾಂಗ್ರೆಸ್ ಇದೇ ಜ.9ರಿಂದ ನಡೆಸಲು ಉದ್ದೇಶಿಸಿದ್ದ ಮೇಕೆದಾಟು ಪಾದಯಾತ್ರೆಯನ್ನು ಸರ್ಕಾರ ಪರೋಕ್ಷವಾಗಿ ನಿರಾಕರಿಸಿದಂತಾಗಿದೆ.
ವೇಗವಾಗಿ ಹರಡುತ್ತಿದೆ ಒಮಿಕ್ರಾನ್
ಒಮಿಕ್ರಾನ್ ಸೋಂಕು ಕೊವಿಡ್ಗಿಂತ 5 ಪಟ್ಟು ವೇಗವಾಗಿ ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಹಾಲಿ 3048 ಮಂದಿಗೆ ಸೋಂಕು ಬಂದಿದೆ. 47 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ವಾರದೊಳಗೆ 10 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ತಗುಲಬಹುದು ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಪಾಸಿಟಿವ್ ಪ್ರಕರಣ ಶೇ 3ಕ್ಕಿಂತ ಹೆಚ್ಚಾಗುತ್ತಿದೆ. 20 ರಿಂದ 50 ವರ್ಷದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಸಚಿವರು ತಿಳಿಸಿದರು.
ಅಮೆರಿಕಾ ಸೇರಿದಂತೆ ರಾಷ್ಟ್ರದ ರಾಜಧಾನಿ ದೆಹಲಿ ಮತ್ತು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತಿತರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಶರವೇಗದಲ್ಲಿ ಹರಡುತ್ತಿವೆ. ಮುಖ್ಯವಾಗಿ ಮೆಟ್ರೋ ನಗರಗಳಲ್ಲಿ ಇದರ ಹಾವಳಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಇಡಿ ಕರ್ನಾಟಕ ಹಾಗೂ ಬೆಂಗಳೂರು ಹೀಗೆ ಎರಡು ಪ್ರತ್ಯೇಕ ಕೋವಿಡ್ ನಿರ್ವಹಣಾ ನೀತಿ ಅನುಸರಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರಿನಲ್ಲಿ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಮತ್ತಿತರ ಆರೋಗ್ಯ ಸೌಲಭ್ಯಗಳ ಲಭ್ಯತೆ ಕುರಿತು ಮಾಹಿತಿ ಪಡೆಯಲಾಗಿದೆ. ಸದ್ಯಕ್ಕೆ ಹಾಸಿಗೆ ಮತ್ತು ಆಕ್ಸಿಜನ್ ಕೊರತೆ ಇಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಆರೋಗ್ಯ ಸೌಲಭ್ಯ ಹೆಚ್ಚಿಸಲಾಗುವುದು ಎಂದೂ ಅವರು ಹೇಳಿದರು. ಶೀಘ್ರವೇ ಮೆಟ್ರೋ, ಬಸ್, ಟ್ಯಾಕ್ಸಿ ಸೇವೆ ಮತ್ತಿತರ ಸಾರ್ವಜನಿಕ ಸಂಚಾರ ವ್ಯವಸ್ಥೆ ಕುರಿತು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದರು.
ಮಾರ್ಗಸೂಚಿ ಪ್ರಕಟ
ಕೋವಿಡ್ ನಿರ್ವಹಣೆ ಸಂಬಂಧ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಕೋವಿಡ್ ಕುರಿತ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮಾರ್ಗಸೂಚಿಯಲ್ಲಿ ವಾರಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಯಾವುದಕ್ಕೆ ಅವಕಾಶವಿದೆ, ಯಾವುದಕ್ಕೆ ಇಲ್ಲ ಎಂಬುದರ ಕುರಿತು ವಿವರಣೆ ನೀಡಲಾಗಿದೆ.
