ಆನ್ ಲೈನ್ ನಲ್ಲಿ ಉದ್ಯೋಗ ಹುಡುಕಲು ಹೋಗಿ ಹಣ ಕಳೆದುಕೊಂಡ ವ್ಯಕ್ತಿ!

ಹುಬ್ಬಳ್ಳಿ: ಆನ್ ಲೈನ್ನಲ್ಲಿ ಉದ್ಯೋಗ ಹುಡುಕಲು ಹೋಗಿ ವ್ಯಕ್ತಿಯೊಬ್ಬ ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಆನ್ ಲೈನ್ನಲ್ಲಿ ಪರಿಚಯವಾದ ಮಹಿಳೆಯ ಮಾತು ನಂಬಿ ಹಂತ ಹಂತವಾಗಿ ವ್ಯಕ್ತಿ ಹಣ ಕಳೆದುಕೊಂಡಿದ್ದು, ವಂಚನೆಗೆ ಸಂಬಂಧಿಸಿದಂತೆ ಈಗ ಸೈಬರ್ ಠಾಣೆಗೆ ದೂರು ನೀಡಿದ್ದಾನೆ.
ನವನಗರ ಪಂಚಾಕ್ಷರಿ ನಗರದ ನಿವಾಸಿ ಮನಪ್ರೀತ ರೆಡ್ಡಿ ಎಂಬುವರೇ ವಂಚನೆಗೆ ಒಳಗಾದವರಾಗಿದ್ದಾರೆ. ಮನಪ್ರೀತ ಫೋನ್ ಕ್ರೋಮ್ ಆಪ್ ನಲ್ಲಿ ಉದ್ಯೋಗ ಹುಡುಕಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯಿಂದ ಇವರ ವಾಟ್ಸಪ್ಗೆ ಮೆಸೇಜ್ ಕಳುಹಿಸಿದ್ದಾರೆ. ಇದನ್ನು ತೆರೆದಾಗ ಇನ್ನೊಂದು ನಂಬರ್ನಿಂದ ಹೇಗೆ ಹಣಗಳಿಸಬೇಕು ಎಂಬ ಸಂದೇಶ ಬಂದಿದೆ. ಮುಂಬೈ ಅಮೇಜಾನ್ ಕಂಪನಿಯ ಅಸಿಸ್ಟೆಂಟ್ ಕಸ್ಟಮರ್ ರಾಣಿ ಎಂಬ ಹೆಸರಿನ ಮಹಿಳೆ ಪರಿಚಯವಾಗಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂದು ನಂಬಿಸಿದ್ದಾರೆ. ಬಳಿಕ ವ್ಯಕ್ತಿಯಿಂದ ಹಂತ ಹಂತವಾಗಿ 1,23,874 ರೂ ಹಣವನ್ನು ಜಮಾ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ.
ಇನ್ನೂ ಮನಪ್ರೀತರಿಗೆ ವಂಚನೆಗೆ ಒಳಗಾಗಿದ್ದೇನೆ ಎಂಬುವುದು ಗೊತ್ತಾಗುತ್ತಿದ್ದಂತೆ, ಹುಬ್ಬಳ್ಳಿ ಸೈಬರ್ ಪೊಲೀಸರಿಗೆ ವಂಚನೆ ಕುರಿತು ವಿವರಿಸಿದ್ದು, ನಂತರ ವಂಚನೆ ಪ್ರಕರಣದ ಕುರಿತು ಸೈಬರ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ಈಗ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
