Breaking NewsLatestಮೆಟ್ರೋರಾಜ್ಯಶಿಕ್ಷಣಸುದ್ದಿ

ಎನ್.ಸಿ.ಸಿಯಲ್ಲಿ 7500 ಹೊಸ ಕೆಡೆಟ್‍ಗಳಿಗೆ ಅವಕಾಶ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ಸ್ವಾತಂತ್ರೋತ್ಸವದ 75 ನೇ ವರ್ಷಾಚರಣೆಯ ಸಂದರ್ಭದಲ್ಲಿ 75 ಯುನಿಟ್‍ಗಳನ್ನು ಶಾಲಾ ಕಾಲೇಜುಗಳಲ್ಲಿ ಪ್ರಾರಂಭಿಸಿ, 7500 ಹೊಸ ಕೆಡೆಟ್‍ಗಳಿಗೆ ಈ ಬಾರಿ ಎನ್.ಸಿ.ಸಿ ಯಲ್ಲಿ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಭಾನುವಾರ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನಾಚರಣೆ ಅಂಗವಾಗಿ ಹೊಸದಾಗಿ 75 ನೇತಾಜಿ ಅಮೃತ ಎನ್.ಸಿ.ಸಿ ಶಾಲೆಗಳ ಘೋಷಣೆ, ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಚಾಲನೆ, 75 ಪೈಲಟ್‍ಗಳ ತರಬೇತಿಗೆ ಚಾಲನೆ ಪಿ2006ಟಿ ವಿಮಾನ ಲೋಕಾರ್ಪಣೆ, ಹೆಲಿಟೂರಿಸಂ ಗೆ ಚಾಲನೆ ನೀಡಿ ಮಾತನಾಡಿದರು.

ಎನ್.ಸಿ.ಸಿ ಸೇರುವ ಯುವಕರಲ್ಲಿ ಆಸಕ್ತಿ ಹೆಚ್ಚು ಮಾಡಿ ಯುವಕರನ್ನು ಉತ್ತೇಜಿಸಲು ಈ ತೀರ್ಮಾನಕ್ಕೆ ಬರಲಾಗಿದೆ. ಪ್ರತಿಯೊಬ್ಬರಿಗೂ 12,000 ರೂ.ಗಳನ್ನು ಸಂಪೂರ್ಣವಾಗಿ ಭರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರಾಜ್ಯದ ಶಾಲೆಗಳಲ್ಲಿ 44,000 ಕೆಡೆಟ್‍ಗಳಿದ್ದು, ಎನ್.ಸಿ.ಸಿಯಲ್ಲಿ ಕಷ್ಟಕರವಾಗಿರುವ ಕಾರ್ಯಕ್ರಮವನ್ನು ಪುನರ್ ರಚಿಸಲು ರಕ್ಷಣಾ ಸಚಿವಾಲಯದ ಒಪ್ಪಿಗೆ ಪಡೆದು, ಅವರಿಗೆ ರಾಜ್ಯ ಸರ್ಕಾರ ಎನ್.ಸಿ.ಸಿ ಚಟುವಟಿಕೆಗಳಿಗೆ ಹಣದ ಸಂಪೂರ್ಣ ನೆರವು ನೀಡಲಾಗುವುದು ಎಂದರು.

44 ಸಾವಿರ ಘಟಕಗಳನ್ನು ಕಾಲೇಜುಗಳಿಗೆ ಸ್ಥಳಾಂತರ ಮಾಡಿ ಒಟ್ಟು 50 ಸಾವಿರಕ್ಕಿಂತ ಹೆಚ್ಚು ಕೆಡೆಟ್‍ಗಳನ್ನು ಮುಂದಿನ ವರ್ಷ ಕಾಲೇಜುಗಳಲ್ಲಿ ರೂಪಿಸುವ ಯೋಜನೆ ಇದೆ. ಇದಕ್ಕೆ ರಕ್ಷಣಾ ಸಚಿವಾಲಯದ ಅನುಮತಿ ಅಗತ್ಯವಿದ್ದು, ಅನುಮತಿ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.

ಪೂರ್ಣಚಾಲಿತ ರನ್ ವೇ

ನಿಂತುಹೋಗಿದ್ದ ಸರ್ಕಾರಿ ಪ್ಲೈಯಿಂಗ್ ಶಾಲೆ ಪುನರಾರಂಭ ಮಾಡಿರುವುದು ಕಿರೀಟಪ್ರಾಯವಾಗಿದೆ. 100 ಜನರಿಗೆ ತರಬೇತಿ ನೀಡುವ ತೀರ್ಮಾನ ಮಾಡಲಾಗಿದ್ದು ಟ್ವಿನ್ ಇಂಜಿನ್ ವಿಮಾನವನ್ನೂ ಇಲ್ಲಿ ತರಲಾಗಿದೆ. ಪೂರ್ಣಚಾಲಿತ ರನ್‍ವೇ ಪ್ರಾರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ, ಸ್ಥಳದ ವ್ಯವಸ್ಥೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಇದರೊಂದಿಗೆ ಮಹಿಳಾ ಸ್ವರಕ್ಷಣೆಗೆ ಪೊಲೀಸ್ ಇಲಾಖೆಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ದೊಡ್ಡ ಪ್ರಮಾಣದಲ್ಲಿ ಮಹಿಳೆಯರ ರಕ್ಷಣೆಯಾಗಬೇಕು. ಮಹಿಳಾ ಸ್ವಯಂ ರಕ್ಷಣೆ ಶಾಲಾ ಕಾಜೇಜುಗಳಲ್ಲಿಯೂ ಹಮ್ಮಿಕೊಳ್ಳಬೇಕು. ಹೆಲಿಟೂರಿಸಂ ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನೇತಾಜಿಯವರ ಜನ್ಮದಿನದಂದು ಆಗುತ್ತಿದೆ ಎಂದೂ ಸಿಎಂ ಹೇಳಿದರು.

ನೇತಾಜಿಗೆ ಕರ್ನಾಟಕದ ನಂಟು

ಕರ್ನಾಟಕಕ್ಕೂ, ನೇತಾಜಿ ಅವರಿಗೂ ದೊಡ್ಡ ನಂಟಿರುವುದನ್ನು ಸ್ಮರಿಸಿದ ಸಿಎಂ, ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಪಟ್ಟಾಭಿರಾಮ್ ರೆಡ್ಡಿಯವರಿಗೆ ಮಹಾತ್ಮಗಾಂಧಿಯವರು ಬೆಂಬಲ ನೀಡಿದಾಗ ಹಾವೇರಿಯ ಸಿದ್ದಪ್ಪ ಹೊಸಮನಿಯವರು ಬಾಂಬೆ ಪ್ರಾವಿನೆನ್ಸ್ ಕಾಂಗ್ರೆಸ್‍ನ ಪ್ರಮುಖ ನಾಯಕರಾಗಿದ್ದರು. ಆ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ ಬೆಂಬಲ ನೀಡಿದ್ದರು ಎಂದು ತಿಳಿಸಿದರು. ಹೊಸಮನಿಯವರು ಪತ್ರವನ್ನು ಕಂಡ ಕೂಡಲೇ ಧಾರವಾಡಕ್ಕೆ ನೇತಾಜಿಯವರು ಆಗಮಿಸಿದ್ದರು ಎನ್ನುವ ಪ್ರಸಂಗದ ಬಗ್ಗೆ ತಮ್ಮ ತಂದೆಯಿಂದ ತಿಳಿದುಕೊಂಡಿರುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button