ಜನರ ಸಹಕಾರದೊಂದಿಗೆ ಕೋವಿಡ್ ನಿಯಂತ್ರಣದಲ್ಲಿದೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು : ರಾಜ್ಯದಲ್ಲಿ 73 ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ನೆರವೇರಿಸಿದ ಬಳಿಕ ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, 73ನೇ ಗಣರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಜನತೆಗೆ ನನ್ನ ಶುಭ ಕಾಮನೆಗಳು. ಎಂದಿಗೂ ಮಣಿಯದ ಮಾನವ ಚೈತನ್ಯ ಶಕ್ತಿಗೆ ಗಣರಾಜ್ಯೋತ್ಸವದ ಸಮಾರಂಭವನ್ನು ಅರ್ಪಿಸುತ್ತೇನೆ. 2021-22ರಲ್ಲಿ ಜಗತ್ತು ಸವಾಲನ್ನು ನಿಭಾಯಿಸಲು ಹೆಣಗುತ್ತಿರುವಾಗ ನಾವು ಕೋವಿಡ್19 ವಿರುದ್ಧ ಅತ್ಯಂತ ಸಮರ್ಥವಾಗಿ ಹೋರಾಡಿದ್ದೇವೆ. ರಾಜ್ಯದಲ್ಲಿ ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಟ ನಡೆಸಲಾಗಿದೆ ಎಂದು ತಿಳಿಸಿದರು.
ಜನರ ಸಹಕಾರದೊಂದಿಗೆ ಕೋವಿಡ್ ನಿಯಂತ್ರಣದಲ್ಲಿದೆ. ಭಾರತವು ಎರಡು ಲಸಿಕೆಗಳನ್ನು ಉತ್ಪಾದಿಸಿರುವುದಲ್ಲದೇ ಈ ಲಸಿಕೆಗಳನ್ನು ಇತರ ದೇಶಗಳಿಗೂ ಸಹ ರಫ್ತು ಮಾಡುವಲ್ಲಿ ಯಶಸ್ವಿಯಾಗಿದೆ ಎಂಬುದು ಗಮನಾರ್ಹವಾದ ಅಂಶ. ಲಸಿಕೆಯು ಹಂತ ಹಂತವಾಗಿ ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳಲು ನಾವು ಕೇಂದ್ರ ಸರ್ಕಾರದೊಂದಿಗೆ ನಿಕಟ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದೇವೆ. ನಾನು ಮತ್ತು ನಮ್ಮ ಸರ್ಕಾರ, ಸಾಂಕ್ರಾಮಿಕ ರೋಗದ ಈ ಪರಿಸ್ಥಿತಿಯಲ್ಲಿ ಅವಿರತವಾಗಿ ಶ್ರಮಿಸಿದ ನಮ್ಮ ವೈದ್ಯರುಗಳಿಗೆ, ನರ್ಸ್‌ಗಳಿಗೆ, ಪೊಲೀಸ್ ಸಿಬ್ಬಂದಿಗೆ ಹಾಗೂ ಎಲ್ಲಾ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರುಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ವಿಪತ್ತಿನ ಸವಾಲನ್ನು ಸಮರ್ಥವಾಗಿ ಎದುರಿಸಿ, ನಿಯಂತ್ರಿಸಲು ಶ್ರಮಿಸಿದ ನಮ್ಮ ಕ್ಷೇತ್ರ ಸಿಬ್ಬಂದಿ, ವಿಕೋಪ ನಿರ್ವಹಣಾ ತಂಡಗಳು ಮತ್ತು ಜಿಲ್ಲಾ ಮುಖ್ಯ ಅಧಿಕಾರಿಗಳಿಗೂ ಕೂಡ ನಾನು ವಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
