ನಾಳೆ ಯುಪಿಯಲ್ಲಿ 2ನೇ ಹಾಗೂ ಗೋವಾ ಮತ್ತು ಉತ್ತರಾಖಂಡದಲ್ಲಿ ಒಂದೇ ಹಂತದ ಮತದಾನ

ನವದೆಹಲಿ: ಉತ್ತರ ಪ್ರದೇಶದ 55 ವಿಧಾನಸಭೆ ಕ್ಷೇತ್ರಗಳಲ್ಲಿ ಸೋಮವಾರ ಎರಡನೇ ಹಂತದ ಮತಾದಾನ ನಡೆಯಲಿದೆ. ಮುಕ್ತ, ನ್ಯಾಯಸಮ್ಮತ ಮತ್ತು ಕೊರೋನಾ ಮುಕ್ತ ಮತದಾನ ಸಕಲ ಸಿದ್ದತೆ ನಡೆದಿದ್ದು, ಮತಗಟ್ಟೆಗಳನ್ನು ಆಯಾ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ.
ಫೆ.10 ರಿಂದ ಮಾ.7ರವರೆಗೆ ರಾಜ್ಯದಲ್ಲಿ ಒಟ್ಟು 7 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2ನೇ ಹಂತದ ಚುನಾವಣೆಯೂ ರೋಹಿಲ್ ಖಂಡ್ ಪ್ರದೇಶ ಮತ್ತು ಪಶ್ಚಿಮ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ನಡೆಯಲಿದೆ. ಇದು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಅಲ್ಪಸಂಖ್ಯಾತ ಮತದಾರರ ಜನಸಂಖ್ಯೆಯನ್ನು ಗಮನಾರ್ಹವಾಗಿ ಹೊಂದಿದೆ.
ರಾಜ್ಯದ 9 ಜಿಲ್ಲೆಗಳ 55 ವಿಧಾನಸಭೆ ಸ್ಥಾನಗಳಿಗೆ ಒಟ್ಟು 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 9 ಸ್ಥಾನಗಳು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿವೆ. ಸುಹಾನ್ ಪುರ, ಬಿಜ್ನೋರ್, ಅಮ್ರೋಹಾ, ಮೊರಾದಾಬಾದ್, ರಾಂಪುರ, ಬರೇಲಿ, ಶಹಜಹಾನ್ ಪುರ, ಬಡಯುನ್ ಮತ್ತು ಸಂಭಾಲ್ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ.
ಸಮಾಜವಾದಿ ಪಕ್ಷದ ಹಿರಿಯ ಧುರೀಣ ಆಜಂಖಾನ್ ಸ್ಪರ್ಧಿಸಿರುವ ರಾಂಪುರ ಕ್ಷೇತ್ರದತ್ತ ಎಲ್ಲರ ಚಿತ್ತ ನೆಟ್ಟಿದೆ. ಸುವಾರ್ ಕ್ಷೇತ್ರದಿಂದ ಆಜಂಖಾನ್ ಪುತ್ರ ಅಬ್ಬಲ್ಲಾ ಆಜಂ ಸ್ಪರ್ಧಿಸಿದ್ದು, ಇವರಿಗೆ ಎದುರಾಳಿಯಾಗಿ ಬಿಜೆಪಿ ಮೈತ್ರಿಕೂಡದ ಏಕೈಕ ಮುಸ್ಲಿಂ ಅಭ್ಯರ್ಥಿ ಹೈದರ್ ಅಲಿ ಖಾನ್, ಅಪ್ನಾ ದಳದ ಚಿಹ್ನೆಯಡಿ ಸ್ಪರ್ಧಿಸಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಚಿವರಾಗಿದ್ದ ಧರ್ಮ್ ಸಿಂಗ್ ಸೈನಿ ಈ ಬಾರಿ ಸಮಾಜವಾದಿ ಪಕ್ಷದಿಂದ ಸಹರಾನ್ ಪುರ ಜಿಲ್ಲೆಯ ನಕೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಕಣ ಕುತೂಹಲ ಕೆರಳಿಸಿದೆ.
ಸೋಮವಾರ ಮತದಾನ ನಡೆಯಲಿರುವ 55 ಸ್ಥಾನಗಳ ಪೈಕಿ ಬಿಜೆಪಿ ಕಳೆದ ಬಾರಿ 38 ಹಾಗೂ ಸಮಾಜವಾದಿ ಪಕ್ಷ 15 ಮತ್ತು ಕಾಂಗ್ರೆಸ್ 2 ಸ್ಥಾನಗಳನ್ನು ಗಳಿಸಿತ್ತು.
ಉತ್ತರಾಖಂಡ, ಗೋವಾದಲ್ಲೂ ಮತದಾನ
ನಾಳೆ ಸೋಮವಾರ ಉತ್ತರಾಖಂಡದ 70 ವಿಧಾನಸಭೆ ಕ್ಷೇತ್ರಗಳಿಗೆ 81 ಲಕ್ಷಕ್ಕೂ ಅಧಿಕ ಮತದಾರರು ಮತದಾನ ಮಾಡಲಿದ್ದಾರೆ. ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ.
ಗೋವಾದಲ್ಲಿ ಒಂದೇ ಹಂತದ ಮತದಾನಕ್ಕೆ ಸಿದ್ದತೆಗಳು ಪೂರ್ಣಗೊಂಡಿವೆ. ರಾಜ್ಯದ 40 ಕ್ಷೇತ್ರಗಳಲ್ಲಿ ಸೋಮವಾರ ಮತದಾನ ನಡೆಯಲಿದೆ. 11ಲಕ್ಷದ 64 ಸಾವಿರ 224 ಮತದಾರರು ಕಣದಲ್ಲಿರುವ 82 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ 301 ಮಂದಿಯ ಚುನಾವಣೆ ಭವಿಷ್ಯ ನಿರ್ಧರಿಸಲಿದ್ದಾರೆ.
ಮದ್ಯ ಪೂರೈಕೆಗೆ ನಿರ್ಬಂಧ
ಉತ್ತರ ಮತ್ತು ದಕ್ಷಿಣ ಗೋವಾದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಆದರೂ ಬಾರ್ ಮತ್ತು ರೆಸ್ಟೋರೆಂಟ್ ಪರವಾನಗಿ ಹೊಂದಿರುವ ಆವರಣಗಳಿಗೆ ಮಾತ್ರ ಆಹಾರವನ್ನು ಪೂರೈಸಲು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲಾಗಿದೆ. ಬಾರ್ ಕೌಂಟರ್ ಮುಚ್ಚಲಾಗುವುದು ಮತ್ತು ಯಾವುದೇ ಮದ್ಯ ಸರಬರಾಜು ಇರುವುದಿಲ್ಲ.
